ಘನತ್ಯಾಜ್ಯ ನಿರ್ವಹಣೆಗೆ ರಾಜ್ಯಗಳ ಇಚ್ಛಾಶಕ್ತಿಯ ಕೊರತೆಯಿದೆ: ಸರ್ವೋಚ್ಛ ನ್ಯಾಯಾಲಯ

ಹೊಸದಿಲ್ಲಿ, ಡಿ.18: ಘನತ್ಯಾಜ್ಯ ನಿರ್ವಹಣೆಯನ್ನು ಒಂದು ಬೃಹತ್ ಸಮಸ್ಯೆ ಎಂದು ವ್ಯಾಖ್ಯಾನಿಸಿರುವ ಸರ್ವೋಚ್ಛ ನ್ಯಾಯಾಲಯ, ಸ್ವಚ್ಛ ಭಾರತ ಯೋಜನೆಯಡಿ ಹಣದ ಕೊರತೆಯಿಲ್ಲದಿದ್ದರೂ ಈ ಬಗ್ಗೆ ಗುಣಾತ್ಮಕ ಹೆಜ್ಜೆಯಿಡಲು ರಾಜ್ಯ ಸರಕಾರಗಳಲ್ಲಿ ಇಚ್ಛಶಕ್ತಿಯ ಕೊರತೆಯಿದೆ ಎಂದು ತಿಳಿಸಿದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವರದಿಯನ್ನು ಪರಿಗಣಿಸಿದ ಘನ ನ್ಯಾಯಾಲಯ ಸ್ವಚ್ಛ ಭಾರತ ಯೋಜನೆಯಡಿ ಒಟ್ಟಾರೆಯಾಗಿ 36,829 ಕೋಟಿ ರೂ. ನಿಧಿಯನ್ನು ನಿಗದಿಪಡಿಸಲಾಗಿದ್ದು ಈ ಪೈಕಿ ರೂ. 7,424 ಕೋಟಿ ಕೇಂದ್ರ ಸರಕಾರ ನೀಡುತ್ತಿದೆ ಎಂದು ತಿಳಿಸಿದೆ.
ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ರಾಜ್ಯ ಸರಕಾರಗಳು ಗಂಭೀರವಾಗಿ ಮತ್ತು ಕಾಳಜಿಯಿಂದ ನೋಡುವಂತಹ ಅಗತ್ಯವಿದೆ ಎಂದು ನ್ಯಾಯಾಧೀಶರಾದ ಮದನ್ ಬಿ ಲೋಕುರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠವು ತಿಳಿಸಿದೆ.
ಸಚಿವಾಲಯ ನೀಡಿರುವ ವರದಿಯ ಪ್ರಕಾರ ಘನತ್ಯಾಜ್ಯ ನಿರ್ವಹಣೆಗೆ ಹಣದ ಕೊರತೆಯಿಲ್ಲ ಎಂಬುದು ತಿಳಿಯುತ್ತದೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ರಾಜ್ಯ ಸರಕಾರಗಳು ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ ಎಂಬುದೂ ಸ್ಪಷ್ಟವಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.







