ಕಾಂಗ್ರೆಸ್ ರೂಪಾಂತರ ನನ್ನ ಯೋಜನೆ: ರಾಹುಲ್ ಗಾಂಧಿ

ಹೊಸದಿಲ್ಲಿ, ಡಿ. 18: ನೆಲಕಚ್ಚಿರುವ ಕಾಂಗ್ರೆಸ್ ಅನ್ನು ರೂಪಾಂತರಗೊಳಿಸುವ ಹಾಗೂ ಹಲವು ಹೊಸ, ಯುವ, ಆಕರ್ಷಕ ಹಾಗೂ ಕ್ರಿಯಾಶೀಲ ಮುಖಗಳನ್ನು ಪಕ್ಷಕ್ಕೆ ತರುವ ಉದ್ದೇಶವನ್ನು ತಾನು ಹೊಂದಿದ್ದೇನೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಇಂಗ್ಲಿಷ್ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಹುಲ್ ಗಾಂಧಿ, ಗುಜಾರಾತ್‌ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಾತಿ ಹಿನ್ನೆಲೆಯಲ್ಲಿ ಸ್ಪರ್ಧಿಸಿದೆ ಎಂಬ ಬಿಜೆಪಿಯ ಪ್ರತಿಪಾದನೆ ಅಸಂಬದ್ಧ. ಕಾಂಗ್ರೆಸ್ ಒಬಿಸಿ, ದಲಿತರು ಹಾಗೂ ಪಾಟಿದಾರ್ ಸಮುದಾಯವನ್ನು ವೇದಿಕೆಯಲ್ಲಿ ಒಂದುಗೂಡಿಸಿದೆ ಎಂದರು. ದೇಶ ದಿವಾಳಿಯಾಗಿದೆ ಎಂದು ನರೇಂದ್ರ ಮೋದಿ ಸರಕಾರವನ್ನು ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ತಳಕಚ್ಚಿರುವ ಕಾಂಗ್ರೆಸ್‌ನ್ನು ರೂಪಾಂತರಗೊಳಿಸುವುದು ತನ್ನ ಉದ್ದೇಶ ಎಂದರು.
ಆದರೆ, ಇದು ಕೇವಲ ತನ್ನ ಯೋಜನೆ ಅಲ್ಲ. ರೂಪಾಂತರ, ವಿಕಸನ, ಬದಲಾವಣೆ ಕಾಂಗ್ರೆಸ್‌ನ ಒಳಗಿರುವವರ ಆಕಾಂಕ್ಷೆ. ಇದು ಸಾಧ್ಯವಾಗಲು ನಾನು ಪ್ರಯತ್ನಿಸುತ್ತೇನೆ ಹಾಗೂ ನೆರವು ನೀಡುತ್ತೇನೆ ಎಂದು ಅವರು ಹೇಳಿದರು.
ಇದು ತನ್ನ ನಿರ್ದಿಷ್ಟ ಉದ್ದೇಶ. ಯೂತ್ ಕಾಂಗ್ರೆಸ್ ಹಾಗೂ ಎನ್‌ಎಸ್‌ಯುಐ ಮೂಲಕ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ಹೊಸ, ಯುವ, ಕ್ರಿಯಾಶೀಲ, ಆಕರ್ಷಕ ಮುಖಗಳನ್ನು ಕಾಂಗ್ರೆಸ್‌ಗೆ ತರಲು ನಾವು ಬಯುಸುತ್ತಿದ್ದೇವೆ. ಇದರರ್ಥ ಅನುಭವಿಗಳು ಹಾಗೂ ಹಿರಿಯರಿಗೆ ಇಲ್ಲಿ ಜಾಗವಿಲ್ಲ ಎಂದಲ್ಲ ಎಂದು ಅವರು ಹೇಳಿದರು.







