ಜಾನುವಾರು ಸಾಗಾಟದ ವಾಹನ ತಡೆದು ಚಾಲಕರಿಗೆ ಹಲ್ಲೆಗೈದ ಹಿಂದೂ ಯುವವಾಹಿನಿ ಕಾರ್ಯಕರ್ತರು

ಲಕ್ನೊ, ಡಿ.18: ಶನಿವಾರ ಸಂಜೆ ಲಕ್ನೊ ಸಮೀಪದ ಹಪುರ್ ಬೈಪಾಸ್‌ನಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ಎರಡು ಟ್ರಕ್‌ಗಳನ್ನು ತಡೆದ ಹಿಂದೂ ಯುವವಾಹಿನಿಯ ಕಾರ್ಯಕರ್ತರು ಚಾಲಕರ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಟ್ರಕ್ ಚಾಲಕರ ಮೇಲೆ ಪ್ರಾಣಿಗಳ ಮೇಲಿನ ಹಿಂಸೆ ತಡೆ ಕಾಯ್ದೆ (1960) ಯಡಿ ಪ್ರಕರಣ ದಾಖಲಿಸಿರುವುದಾಗಿ ಮೀರತ್‌ನ ಪೊಲೀಸ್ ವರಿಷ್ಠಾಧಿಕಾರಿ ಮಾನ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಮೂರು ಚಾಲಕರ ಪೈಕಿ ಒಬ್ಬ ಪರಾರಿಯಾಗುವಲ್ಲಿ ಯಶಸ್ವಿಯಾದರೆ ಉಳಿದಿಬ್ಬರನ್ನು ಯುವವಾಹಿನಿಯ ಕಾರ್ಯಕರ್ತರು ಹಿಡಿದು ಥಳಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಪೊಲೀಸರು ಮಾತ್ರ ಇದನ್ನು ಅಲ್ಲಗಳೆದಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳದೆ ಗೋಸಾಗಾಟದ ಯಾವುದೇ ಪ್ರಕರಣಗಳು ಗಮನಕ್ಕೆ ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಯುವವಾಹಿನಿ ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಟ್ರಕ್‌ಗಳಿಂದ ಐವತ್ತು ಎಮ್ಮೆಗಳನ್ನು ರಕ್ಷಿಸಲಾಗಿದ್ದು ಅವುಗಳ ನಿಜವಾದ ಮಾಲಕರು ನ್ಯಾಯಾಲಯದಿಂದ ಬಿಡುಗಡೆಯ ಆದೇಶವನ್ನು ಪಡೆದುಕೊಳ್ಳುವವರೆಗೆ ಜಾನುವಾರುಗಳನ್ನು ರೈತರ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಜಾನುವಾರುಗಳನ್ನು ಸರ್ದಾನಾದ ಮಾರುಕಟ್ಟೆಯಿಂದ ಖರೀದಿಸಲಾಗಿರುವ ಕಾರಣ ಕಾನೂನುಬಾಹಿರವಾಗಿ ಈ ಎಮ್ಮೆಗಳನ್ನು ಸಾಗಿಸಲಾಗುತ್ತಿತ್ತು ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿರುವ ಪೊಲೀಸರು ವಶಪಡಿಸಿಕೊಳ್ಳಲಾದ ಜಾನುವಾರುಗಳನ್ನು ಇರಿಸಿಕೊಳ್ಳಲು ಪೊಲೀಸರಿಗೆ ಜಾಗವಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಗೋರಕ್ಷಕರು ಚಾಲಕರ ಮೇಲೆ ಹಲ್ಲೆ ನಡೆಸುವ ಘಟನೆಗಳು ಹೆಚ್ಚಾಗುತ್ತಿರುವ ಕಾರಣ ಸಾಗಾಟಗಾರರ ಸಂಘವು ಜಾನುವಾರುಗಳನ್ನು ಸಾಗಿಸುವುದನ್ನು ನಿಷೇಧಿಸಿದೆ. ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಮೀರತ್‌ನ ಸಾರಿಗೆ ಸಂಘದ ಅಧ್ಯಕ್ಷ ಗೌರವ್ ಶರ್ಮಾ, ಸಂಘವು ಜಾನುವಾರುಗಳನ್ನು ವಾಹನದಲ್ಲಿ ಸಾಗಿಸುವುದನ್ನು ನಿಷೇಧಿಸಿದೆ ಮತ್ತು ಹಾಗೆ ಮಾಡುವ ಚಾಲಕರು ತಮ್ಮ ಮೇಲಾಗುವ ಹಲ್ಲೆಗಳಿಗೆ ತಾವೇ ಜವಾಬ್ದಾರರಾಗಿರುತ್ತಾರೆ ಎಂದು ತಿಳಿಸಿದ್ದಾರೆ.







