ಮೂಡಿಗೆರೆ: ಅರಣ್ಯಇಲಾಖೆಯಿಂದ ಕಾಫಿ,ಕಾಳು ಮೆಣಸು ತೋಟ ಧ್ವಂಸ; ರೈತರಿಂದ ಕಚೇರಿಗೆ ಮುತ್ತಿಗೆ
ಕಲ್ಲು ತೂರಾಟ

ಮೂಡಿಗೆರೆ, ಡಿ.18: ಕಟಾವಿಗೆ ಸಿದ್ಧಗೊಂಡಿದ್ದ 15 ಎಕರೆ ತೋಟದಲ್ಲಿ ಕಾಫಿ ಮತ್ತು ಕಾಳು ಮೆಣಸಿನ ಬಳ್ಳಿಯನ್ನು ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೋಮವಾರ ಕಡಿದು ದ್ವಂಸಗೊಳಿಸಿದ್ದನ್ನು ಖಂಡಿಸಿ ಕರ್ನಾಟಕ ಬೆಳೆಗಾರರ ಪದಾಧಿಕಾರಿಗಳು ಹಾಗೂ ತೊಟದ ಮಾಲಕರು ಮೂಡಿಗೆರೆ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಧ್ವಂಸಗೊಳಿಸಿದ ಕಾಫಿ ಮತ್ತು ಕಾಳು ಮೆಣಸಿನ ಗಿಡಗಳನ್ನು ವಾಹನದಲ್ಲಿ ಮೆರವಣಿಗೆ ಮೂಲಕ ಪಟ್ಟಣದ ಅರಣ್ಯ ಇಲಾಖೆ ಕಚೇರಿಗೆ ಮುಂಭಾಗದಲ್ಲಿ ಸುರಿದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ರೊಚ್ಚಿಗೆದ್ದ ಅರಣ್ಯ ಕಚೇರಿಗೆ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜು, ಬಾಗಿಲು ಪುಡಿ ಗೈದರು ಎನ್ನಲಾಗಿದೆ.
ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯ ಕೈಗೆ ಗಾಯವಾಗಿದ್ದು, ಕೆಲ ಸಮಯ ಪೊಲೀಸರು ಮತ್ತು ಪ್ರತಿಭಟನಾಕಾರರಿಗೆ ಮಾತಿನ ಚಕಮಕಿ ನಡೆಯಿತು. ಬಳಿಕ ತಾಪಂ ಅಧ್ಯಕ್ಷ ಕೆ.ಸಿ.ರತನ್ ಸೇರಿದಂತೆ ಕೆಲ ಮುಖಂಡರು ಪ್ರತಿಭಟನಕಾರರನ್ನು ತಡೆಯುವಲ್ಲಿ ಯಶಸ್ವಿಯಾದರು.
ಬಣಕಲ್‌ನ ಹೆಗ್ಗುಡ್ಲು ಗ್ರಾಮದ ಆಲ್ದೂರು ಅರಣ್ಯ ವ್ಯಾಪಿಯ ಸ.ನಂ.169/1ರ ನಾರಾಯಣ್‌ಗೌಡ ಎಂಬವರಿಗೆ ಸೇರಿದ್ದ ಸುಮಾರು 15 ಎಕರೆ ಕಾಫಿ ತೋಟವನ್ನು ಅರಣ್ಯ ಇಲಾಖೆಯು ಅರಣ್ಯ ಭೂಮಿ ಎಂಬ ನ್ಯಾಯಾಲಯದ ಆದೇಶದಂತೆ ಫಸಲಿಗೆ ಬಂದಿದ್ದ ಕಾಫಿಗಿಡ ಮತ್ತು ಕಾಳು ಮೆಣಸಿನ ಬಳ್ಳಿಯನ್ನು ಕಡಿದು ತೆರವು ಗೊಳಿಸಿದರು.
ಪ್ರತಿಭಟನೆಯ ವೇಳೆ ಮಾತನಾಡಿದ ಬಿ.ಎಸ್.ನಾರಾಯಣ ಗೌಡ, 25 ವರ್ಷಗಳಿಂದ ಸ.ನಂ.169/1ರಲ್ಲಿ 15 ಎಕರೆ ಕಾಫಿ ಹಾಗೂ ಕಾಳು ಮೆಣಸು ಬೆಳೆಗಳನ್ನು ಬೆಳೆಯುತ್ತಿದ್ದು, ಇದು ಕಂದಾಯ ಇಲಾಖೆಗೆ ಸೇರಿದ ಜಾಗವಾಗಿದ್ದು, ತೆರವುಗೊಳಿಸಲು ತಿಳಿಸಲಾಗಿತ್ತು. ಆದರೆ, ಈ ಬಾರಿಯ ಕಾಫಿ ಹಾಗೂ ಕಾಳು ಮೆಣಸಿನ ಬೆಳೆಯ ಕಟಾವಿನ ಬಳಿಕ ಕಂದಾಯ ಇಲಖೆಗೆ ಹಸ್ತಾಂತರಿಸುವುದಾಗಿ ರಾಜ್ಯ ಸರಕಾರ, ಅರಣ್ಯ ಇಲಾಖೆ, ಜಿಲ್ಲಾ ಪಂಚಾಯತ್, ತಹಶೀಲ್ದಾರ್ ಸಹಿತ ಗ್ರಾ.ಪಂ.ಗೂ ಮನವಿ ಸಲ್ಲಿಸಿದ್ದೆ. ಈ ಬಾರಿಯ ಬೆಳೆ ಕಟಾವಿಗೆ ಅನುಮತಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಸೋಮವಾರ ಬೆಳಗ್ಗೆ ತಮ್ಮ ಗಮನಕ್ಕೆ ಬಾರದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಬೆಳಗ್ಗಿನ ಸಮಯದಲ್ಲಿ ಏಕಾಏಕಿ ತೋಟಕ್ಕೆ ಪ್ರವೇಶ ಮಾಡಿ, 15 ಎಕರೆ ಕಾಫಿ ಹಾಗೂ ಕಾಳು ಮೆಣಸಿನ ಬಳ್ಳಿಯನ್ನು ಕಡಿದು ಧ್ವಂಸಗೊಳಿಸಿದ್ದಾರೆ. ಇದರಿಂದ ತಮಗೆ ಸುಮಾರು 25 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ದೂರಿದರು.
ಬೆಳೆಗಾರರ ಮೇಲೆ ಆಡಳಿತ ವ್ಯವಸ್ಥೆ ಸವಾರಿ ಮಾಡುತ್ತಿದೆ. ಇದು ಅರಣ್ಯ ಇಲಾಖೆ ನನ್ನ ಕುಟುಂಬಕ್ಕೆ ಮಾಡಿದ ದ್ರೋಹ. ತಾನು ಮಕ್ಕಳಂತೆ ಬೆಳೆದಿದ್ದ ಕಾಫಿ ಗಿಡವನ್ನು ಕೊಚ್ಚಿ ಹಾಕಿದ್ದರಿಂದ ತುಂಬಾ ನೋವು ತಂದಿದೆ. ಗಿಡವನ್ನು ಕೊಚ್ಚುವುದರ ಬದಲು ಅರಣ್ಯ ಇಲಾಖೆ ಅಧಿಕಾರಿಗಳು ನನಗೆ ವಿಷ ಕೊಡಬಹುದಿತ್ತು. ತೋಟ ಧ್ವಂಸಗೊಳಿಸಿರುವುದರಿಂದ ನನಗೆ ಆರ್ಥಕವಾಗಿ ಸಂಕಷ್ಟ ಎದುರಾಗಿದೆ ಎಂದು ನೊಂದು ನುಡಿದರು. ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಬಿ.ಎಸ್.ಜಯರಾಂ ಮಾತನಾಡಿ, ಆಳುವ ಸರಕಾರ ಬೆಳೆಗಾರರ ಮೇಲೆ ನಿರಂತರವಾಗಿ ಸವಾರಿ ಮಾಡುತ್ತಿರುವುದು ಖಂಡನೀಯ. ಬಸ್ನಿ ನಾರಾಯಣಗೌಡ ಅವರ ಕಾಫಿ ತೋಟವನ್ನು ಧ್ವಂಸಗೊಳಿಸಿ ಬೆಳೆಗಾರರೊಬ್ಬರ ಕುಟುಂಬವನ್ನು ಬೀದಿ ಪಾಲು ಮಾಡಿರುವ ಅರಣ್ಯ ಇಲಾಖೆ ತೋಟ ಧ್ವ್ವಂಸದಿಂದಾದ ನಷ್ಟವನ್ನು ಬರಿಸಿಕೊಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಕಾಫಿ ಬೆಳೆಗಾರರು ಸುಲಿಗೆಕೋರರಲ್ಲ. ಬೆಳಗಾರರ ತೋಟಗಳಿಗೆ ಇನ್ನೊಮ್ಮೆ ನುಗ್ಗಿ ಗಿಡಗಳನ್ನು ಧ್ವ್ವಂಸಗೊಳಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸ್ಥಳಕ್ಕೆ ಹಿರಿಯ ಅರಣ್ಯ ಅಧಿಕಾರಿಗಳು ಬರಬೇಕು. ಅಲ್ಲಿಯವರೆಗೆ ನಾವು ಕದಲುವುದಿಲ್ಲ ಎಂದು ಪ್ರತಿಭಟನಾ ನಿರತು ಕಟ್ಟು ಹಿಡಿದರು. ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದ್ದ ಕಾರಣ ವೃತ್ತ ನಿರೀಕ್ಷಕ ಜಗದೀಶ್, ಪಿಎಸ್ಸೈ ರಫೀಕ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು. ಎಂಎಲ್‌ಸಿ ಮೋಟಮ್ಮ, ಎಂ.ಕೆ.ಪ್ರಾಣೇಶ್, ಮಾಜಿ ಶಾಸಕ ಎಂ.ಪಿಕುಮಾರಸ್ವಾಮಿ, ತಾಪಂ ಅಧ್ಯಕ್ಷ ಕೆ.ಸಿ.ರತನ್ ಸೇರಿದಂತೆ ವಿವಿಧ ಮುಖಂಡರು ಡಿಎಪ್‌ಒ ಹಾಗೂ ಎಸಿಎಫ್‌ರನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಇತ್ಯರ್ಥಗೊಳಿಸುವುದಾಗಿ ಹಿರಿಯ ಅಧಿಕಾರಿಗಳ ಬರುವಿಕೆಗೆ ಕಾದು ಕುಳಿತರು.
ಪ್ರತಿಟನೆಯಲ್ಲಿ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಜಿಪಂ ಸದಸ್ಯ ಶಾಮಣ್ಣ, ತಾಪಂ ಅಧ್ಯಕ್ಷ ಕೆ.ಸಿ.ರತನ್, ಬೆಳೆಗಾರ ಸಂಘದ ಮೋಹನ್‌ಕುಮಾರ್, ತೀರ್ಥ ಮಲ್ಲೇಶ್, ಚಂದ್ರೇಶ್, ದುಂಡುಗ ಪ್ರಮೋದ್, ಪಂಚಾಕ್ಷರಿ, ಸುದರ್ಶನ್, ಆದರ್ಶ, ಅನುಕುಮಾರ್ ಭಾಗವಹಿಸಿದ್ದರು.
ಕೆಜಿಎಫ್ ಖಂಡನೆ
ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿದೆ ರಾತ್ರೋರಾತ್ರಿ ಒತ್ತುವರಿ ತೆರವು ಹೆಸರಿನಲ್ಲಿ ಕಾಫಿ ಗಿಡಗಳನ್ನು ಕಡಿದು ಧ್ವಂಸಗೊಳಿಸಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಕೆಜಿಎಫ್ ರಾಜ್ಯಾಧ್ಯಕ್ಷ ಬಿ.ಎಸ್.ಜೈರಾಂ ಮತ್ತು ಪ್ರಧಾನ ಕಾರ್ಯದರ್ಶಿ ಯು.ಎಂ.ತೀರ್ಥಮಲ್ಲೆಶ್ ತಿಳಿಸಿದ್ದಾರೆ.
ಈ ಕುರಿತು ಸೋಮವಾರ ಹೇಳಿಕೆ ನೀಡಿರುವ ಅವರು, ಬಸ್ತಿ ಗ್ರಾಮದ ಬಿ.ಎಸ್. ನಾರಾಯಣಗೌಡ ಅವರ ಸುಮಾರು 15 ಎಕರೆಯ ಕಾಫಿ ಗಿಡ ಮತ್ತು ಮೆಣಸಿನ ಬಳ್ಳಿಗಳನ್ನು ಅರಣ್ಯ ಇಲಾಖೆ ಧ್ವಂಸಗೊಳಿಸಿರುವುದು ಖಂಡನೀಯ ಎಂದಿದ್ದಾರೆ.
ಕಂದಾಯ ಇಲಾಖೆಗೆ ಸಂಬಂಧಪಟ್ಟ ಈ ಜಾಗವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ. ಬಿ.ಎಸ್.ನಾರಾಯಣಗೌಡ ಕೋರ್ಟ್ ಆದೇಶದಂತೆ ಜಮೀನನ್ನು ಬಿಡಲು ಸಿದ್ಧರಾಗಿದ್ದು, ಆದರೆ ಫಸಲಿಗೆ ಬಂದಿರುವ ಬೆಳೆಯನ್ನು ನಾಶ ಮಾಡಿ 25 ಲಕ್ಷ ರೂ. ಬೆಳೆ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ನಷ್ಟ ಭರಿಸಬೇಕು. ಇಲ್ಲದಿದ್ದ ಪಕ್ಷದಲ್ಲಿ ಅರಣ್ಯ ಇಲಾಖೆಯ ವಿರುದ್ಧ ಕೆಜಿಎಫ್ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸ.ನಂ.169/1 ರಲ್ಲಿ ಕಾಫಿತೋಟದ ಜಾಗವು ಕಂದಾಯ ಭೂಮಿಯಾಗಿದ್ದು, ಕಾಫಿ ಬೆಳೆ ಹಾಗೂ ಕಾಳು ಮೆಣಸು ಬೆಳೆಯು ಫಸಲಿಗೆ ಇರುವಾಗಲೇ ಯಾವುದೇ ಆದೇಶದ ಪತ್ರ ತೋರಿಸದೇ ಅರಣ್ಯ ಭೂಮಿ ಎಂದು ಅರಣ್ಯ ಇಲಾಖೆಯವರು ಮೋಸದಿಂದ ಪಹಣಿಯಲ್ಲಿ ತಿದ್ದುಪಡಿ ಮಾಡಿ 15 ಎಕರೆಯಲ್ಲಿ ಕಾಫಿಗಿಡ ಮತ್ತು ಕಾಳು ಮೆಣಸು ಬಳ್ಳಿಯನ್ನು ಕಡಿದು ಹಾಕಿ ನಾಶ ಮಾಡಿದ್ದಾರೆ. 50ಕ್ಕೂ ಅಧಿಕ ಸಿಬ್ಬಂದಿ ರವಿವಾರ ರಾತ್ರಿ ಬಸನಿಯಲ್ಲಿ ಬೀಡು ಬಿಟ್ಟು ಈ ಕೆಲಸ ಮಾಡಿದ್ದಾರೆ.
ಬಿ.ಎಸ್.ನಾರಾಯಣ ಗೌಡ, ಸಂತ್ರಸ್ತ ರೈತ







