ಆಧುನಿಕ ಶಿಕ್ಷಣದಿಂದ ಮೂಢನಂಬಿಕೆಯ ಪೋಷಣೆ: ಪ್ರೊ. ಶ್ರೀಕಂಠ ಕೂಡಿಗೆ ವಿಷಾದ
ಶಿವಮೊಗ್ಗ: 12ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ

ಶಿವಮೊಗ್ಗ, ಡಿ. 18: ಆಧುನಿಕ ಶಿಕ್ಷಣ ನಮ್ಮನ್ನು ಮೂಢನಂಬಿಕಸ್ಥರನ್ನಾಗಿ ಮಾಡುತ್ತಿದೆ. ಉನ್ನತ ಶಿಕ್ಷಣದಿಂದ ಮಾತ್ರ ಸಾಮಾಜಿಕ ಪರಿವರ್ತನೆ ಸಾಧ್ಯ. ಜಾತಿವಾದಿಗಳು, ಮೂಢನಂಬಿಕಸ್ಥರು ಮತ್ತು ಭ್ರಷ್ಟರು ಶಿಕ್ಷಣದಿಂದ ನಿರ್ಮಾಣವಾದರೆ ಅದು ಶಿಕ್ಷಣದ ಸೋಲಾಗುತ್ತದೆ. ಸೈದಾಂತಿಕ ತಿಳುವಳಿಕೆ, ಬದ್ಧತೆ, ಪ್ರಾಮಾಣಿಕತೆ ಮತ್ತು ಚಿಂತನೆಯನ್ನು ಬೆಳೆಸುವ ಕೆಲಸ ಶಿಕ್ಷಣದಿಂದ ಆಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ. ಶ್ರೀಕಂಠ ಕೂಡಿಗೆ ವಿಷಾದ ವ್ಯಕ್ತ ಪಡಿಸಿದ್ದಾರೆ.
ಸೋಮವಾರ ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ನಡೆದ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡುತ್ತಿದ್ದರು.
ಸರಕಾರಗಳು, ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಭಾಷಾ ನೀತಿ ರೂಪಿಸಬೇಕು. ಕಡ್ಡಾಯವಾಗಿ ಮಾತೃಭಾಷೆಯನ್ನು ಕಲಿಸಬೇಕು. ಬಡವರು, ಶ್ರೀಮಂತರಿಗೆ ಒಂದೊಂದು ಶಾಲೆಗಳೆಂಬ ವರ್ಗಭೇದವನ್ನು ನಿವಾರಿಸಬೇಕು ಎಂದು ಅಭಿಪ್ರಾಯಪಟ್ಟರು.
ಕನ್ನಡ ಶಾಲೆ ಮುಚ್ಚುವುದನ್ನು ತಪ್ಪಿಸಲು ಸರಕಾರ ದೃಢ ನಿಲುವು ತೆಗೆದುಕೊಳ್ಳಬೇಕು. ಕನ್ನಡ ಶಾಲೆಗಳ ಮತ್ತು ಶಿಕ್ಷಕರ ವಿಲೀನೀಕರಣವನ್ನು ವೈಜ್ಞಾನಿಕವಾಗಿ ಮಾಡಬೇಕು. ಮಕ್ಕಳನ್ನು ನಿರ್ದಿಷ್ಟ ಮಾರ್ಗಗಳ ಮೂಲಕ ಒಟ್ಟಿಗೆ ವಾಹನದಲ್ಲಿ ಕರೆದೊಯ್ದು ಮತ್ತೆ ಬಿಡುವ ವ್ಯವಸ್ಥೆಯಾಗಬೇಕು. ಪ್ರಾಥಮಿಕ ಪೂರ್ವ ತರಗತಿಗಳನ್ನು ತೆರೆದು ಮಕ್ಕಳ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ನುಡಿದರು.
ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಲು ನುರಿತ ಶಿಕ್ಷಕರನ್ನು ನೇಮಿಸಬೇಕು. ಶಿಕ್ಷಕರಿಗೆ ಇತರ ಕೆಲಸಗಳನ್ನು ಹೊರಿಸುವುದನ್ನು ಬಿಟ್ಟು ಪೂರ್ಣಾವಧಿ ಬೋಧನೆಗೆ ಅವಕಾಶ ಮಾಡಿಕೊಡಬೇಕು. ಇದರಿಂದ ಕೌಶಲ್ಯ ಬೆಳೆದು ಶೈಕ್ಷಣಿಕ ಗುಣಮಟ್ಟ ವೃದ್ಧಿಸುತ್ತದೆ. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಇಂಗ್ಲೀಷ್ ಮಾಧ್ಯಮದ ಮಕ್ಕಳಿಗೆ ಲೌಖಿಕ ವ್ಯವಹಾರ ಪ್ರಯೋಜನದ ದೃಷ್ಟಿಯಿಂದ ಅನುಕೂಲವಿದೆ. ಆದರೆ, ಮುಂದೆಂದೂ ಸಾಂಸ್ಕೃತಿಕ ಅನಾಥ ಪ್ರಜ್ಞೆ ಅವರನ್ನು ಕಾಡಬಾರದು ಎಂದಾದಲ್ಲಿ, ಕನ್ನಡ ಲಿಪಿ ಮತ್ತು ನುಡಿಗಳನ್ನು ಎಳೆ ವಯಸ್ಸಿನಲ್ಲೇ ಅವರಿಗೆ ಕಲಿಸುವುದು ಸೂಕ್ತ ಎಂದರು.
ಇಂದು ಬಳಸುತ್ತಿರುವ ಆಂಟಿ ಮತ್ತು ಅಂಕಲ್ ಪದಗಳು, ಕನ್ನಡದಲ್ಲಿ ಸುಂದರ ಸಂಬಂಧ ವಾಚಕಗಳ ಸ್ಥಾನವನ್ನು ಹೊಂದಿದ್ದರೂ ಅವುಗಳನ್ನು ಬಳಸದೆ ಭಾವಶೂನ್ಯ, ಅನಿರ್ದಿಷ್ಟ ಸಂಬಂಧ ಸೂಚಕಗಳನ್ನು ಬಳಸುವ ಮೂಲಕ ಭಾಷೆಯ ಆರ್ದ್ರತೆ ನಾಶ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಕನ್ನಡದ ಪತ್ರಿಕೆಗಳನ್ನು ಓದುವಲು ಕಲಿಸುವ ಕೆಲಸವನ್ನು ಪಾಲಕರು ಮಾಡಬೇಕು. ಈ ಮೂಲಕ ಕನ್ನಡ ಅವರಲ್ಲಿ ಅಚ್ಚಳಿಯದಂತೆ ಮಾಡಬೇಕು ಎಂದು ಕರೆ ನೀಡಿದರು.
ಕನ್ನಡ ನಾಡಿನಲ್ಲಿ ಕನ್ನಡ ಪ್ರಥಮ ಭಾಷೆಯಾಗಬೇಕು. ಕನ್ನಡವೇ ಶಿಕ್ಷಣ, ಆಡಳಿತ ಭಾಷೆಯಾಗಬೇಕು ಎಂದು 1955ರಲ್ಲಿ ಕುವೆಂಪು ಹಂಬಲಿಸಿದ್ದ ಆದರ್ಶ ಇಂದಿಗೂ ಕೈಗೂಡಿಲ್ಲ.
- ಪ್ರೊ. ಶ್ರೀಕಂಠ ಕೂಡಿಗೆ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ







