ಮಂಗಳೂರು: ತಂಡದಿಂದ ನಾಲ್ವರ ಮೇಲೆ ತಲವಾರು ದಾಳಿ

ಮಂಗಳೂರು, ಡಿ.18: ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ತಂಡವೊಂದು ನಾಲ್ಕು ಮಂದಿಗೆ ತಲವಾರಿನಿಂದ ಹಲ್ಲೆಗೈದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಆ ಪೈಕಿ ಒಬ್ಬ ವ್ಯಕ್ತಿಯ ತಲೆಗೆ ಗಂಭೀರ ಗಾಯವಾಗಿದ್ದು, ಉಳಿದ ಮೂವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ.
ಬಂದರ್‌ನ ಶಫೀಕ್ (45), ಅನೀಸ್ (22), ಹಫೀಝ್ (22) ಗಾಯಗೊಂಡವರು ಎಂದು ಗುರುತಿಸಲಾಗಿದ್ದು, ಪಾನ್ ಅಂಗಡಿ ವ್ಯಾಪಾರಿಯೊಬ್ಬರಿಗೂ ಗಾಯವಾಗಿದ್ದು, ಅವರ ಹೆಸರು ತಿಳಿದು ಬಂದಿಲ್ಲ.
ಬಂದರ್‌ನ ಹರ್ಷ ಬಾರೊಂದರ ಬಳಿ ಶಫೀಕ್‌ಗೆ ಮೂವರನ್ನು ಒಳಗೊಂಡ ತಂಡ ಹಿಗ್ಗಾಮುಗ್ಗ ಥಳಿಸುತ್ತಿದ್ದರು ಎನ್ನಲಾಗಿದೆ. ಅದೇ ದಾರಿಯಾಗಿ ಶಫೀಕ್‌ರ ಪರಿಚಯದ ಅನೀಸ್ ಎಂಬವರು ಪಾಂಡೇಶ್ವರ ಕಡೆಗೆ ತೆರಳುತ್ತಿದ್ದರು. ತಂಡವು ಹಲ್ಲೆ ನಡೆಸುವುದನ್ನು ಕಂಡು ಬಿಡಿಸಲು ಹೋದಾಗ ಮೂವರು ದುಷ್ಕರ್ಮಿಗಳು ತಮ್ಮ ಕಾರಿನಲ್ಲಿದ್ದ ತಲವಾರು ತೆಗೆದು ಹಲ್ಲೆಗೆ ಮುಂದಾದರು. ಈ ಸಂದರ್ಭ ಶಫೀಕ್‌ರ ತಲೆಗೆ ಗಂಭೀರ ಗಾಯವಾದರೆ, ಅನೀಸ್‌ರ ಬಲಕೈಗೆ ಗಾಯವಾಗಿದೆ. ಅನೀಸ್ ಜೊತೆ ಇದ್ದ ವಿದ್ಯಾರ್ಥಿ ಹಫೀಝ್ ಎಂಬವರಿಗೂ ಗಾಯವಾಗಿದೆ ಎಂದು ತಿಳಿದು ಬಂದಿದೆ. ಈ ಮಧ್ಯೆ ಬಾರ್ ಸಮೀಪದ ಪಾನ್ ಅಂಗಡಿ ವ್ಯಾಪಾರಿಗೂ ಗಾಯವಾಗಿದ್ದು, ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
ಮೂವರು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃತ್ಯಕ್ಕೆ ಕಾರಣ ಏನು ಎಂಬುದು ಸ್ಪಷ್ಟಗೊಂಡಿಲ್ಲ. ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.





