ವರದಕ್ಷಿಣೆ ಸಾವು ಪ್ರಕರಣ: ಆರೋಪಿ ಗಂಡನಿಗೆ ಕಠಿಣ ಶಿಕ್ಷೆ
ಮಂಗಳೂರು, ಡಿ.18: ವರದಕ್ಷಿಣೆ ಸಾವು ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿ ಪತಿಗೆ ಕಠಿಣ ಶಿಕ್ಷೆ ವಿಧಿಸಿ ಮಂಗಳೂರಿನ 6ನೆ ಹೆಚ್ಜುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಶಿಕ್ಷೆ ನೀಡಿದೆ.
ಬಂಟ್ವಾಳ ತಾಲೂಕು ಕನ್ಯಾನದ ಕಾಣಿಚ್ಚಾರು ಮನೆಯ ದೇವಿ ಕುಮಾರ್ ಯಾನೆ ಸುನಿಲ್ (38) ಶಿಕ್ಷೆಗೊಳಗಾದ ಆರೋಪಿ.
ಐಪಿಸಿ ಸೆ. 498ಎ ಅನ್ವಯ 1 ವರ್ಷ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ, ಐಪಿಸಿ ಸೆ. 304ಬಿ ಅನ್ವಯ 7 ವರ್ಷ ಕಠಿಣ ಶಿಕ್ಷೆ ಮತ್ತು 15 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದಲ್ಲಿ 2 ತಿಂಗಳ ಸಾದಾ ಸಜೆ, ಐಪಿಸಿ ಸೆ. 302ರ ಅನ್ವಯ 1 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಸಾದಾ ಶಿಕ್ಷೆ ಅನುಭವಿಸಲು ಆದೇಶಿಸಿದೆ. ದಂಡದ ಮೊತ್ತದ ಪೈಕಿ 20 ಸಾವಿರ ರೂ. ಅಲ್ಲದೆ ಪ್ರತ್ಯೇಕವಾಗಿ 1 ಲಕ್ಷ ರೂ. ದಂಡವನ್ನು ಹೆತ್ತವರಿಗೆ ಪಾವತಿಸಲು ನ್ಯಾಯಾಧೀಶ ಡಿ.ಟಿ. ಪುಟ್ಟರಂಗ ಸ್ವಾಮಿ ಆದೇಶಿಸಿದ್ದಾರೆ.
ಬಂಟ್ವಾಳ ತಾಲೂಕು ಕನ್ಯಾನದ ಕಾಣಿಚ್ಚಾರು ಮನೆಯ ದೇವಿ ಕುಮಾರ್ ಯಾನೆ ಸುನಿಲ್ ಮತ್ತು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದ ಹಿರೆಬೈಲ್ ಗ್ರಾಮದ ಸವಿತಾರ ವಿವಾಹವು 2013ರ ಜೂ.3ರಂದು ಕಳಸದಲ್ಲಿ ನಡೆದಿತ್ತು. ಮದುವೆಯ ಬಳಿಕ ಪತಿ-ಪತ್ನಿ ಕನ್ಯಾನದ ಕಾಣಿಚ್ಚಾರು ಮನೆಯಲ್ಲಿ ವಾಸವಾಗಿದ್ದರು.
ದೇವಿ ಕುಮಾರ್ ಪ್ರತಿ ನಿತ್ಯ ಮದ್ಯಪಾನ ಸೇವಿಸಿ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೆ ವರದಕ್ಷಿಣೆ ತರುವಂತೆ ಪೀಡಿಸಿ ಕೊಲೆ ಬೆದರಿಕೆಯನ್ನೂ ಹಾಕಿದ್ದ ಎಂದು ಆರೋಪಿಸಲಾಗಿತ್ತು. 2014 ೆಬ್ರವರಿ 20ರಂದು ರಾತ್ರಿ 8 ಗಂಟೆಗೆ ಆತ ಹಗ್ಗದಿಂದ ಪತ್ನಿಯ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದನು ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಪ್ರಕರಣ (ಐಪಿಸಿ ಸೆ. 498ಎ,304ಬಿ, 302, ವರದಕ್ಷಿಣೆ ತಡೆ ಕಾಯ್ದೆಯ ಸೆಕ್ಷನ 4) ದಾಖಲಾಗಿದ್ದು, ಬಂಟ್ವಾಳ ಡಿವೈಎಸ್ಪಿ ಆಗಿದ್ದ ರಶ್ಮಿ ಪರಡ್ಡಿ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ.ಟಿ. ಪುಟ್ಟರಂಗ ಸ್ವಾಮಿ ಆರೋಪಿ ತನ್ನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿರುವುದು ಮತ್ತು ಈ ಕಿರುಕುಳದಿಂದಾಗಿ ಆಕೆ ಸಾವನ್ನಪ್ಪಿರುವುದು ಹಾಗೂ ವರದಕ್ಷಿಣೆಗಾಗಿ ಬೇಡಿಕೆ ಮಂಡಿಸಿರುವುದು ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ದೇವಿ ಕುಮಾರ್ ಯಾನೆ ಸುನಿಲ್ ತಪ್ಪಿತಸ್ಥ ಎಂದು ಶನಿವಾರ ಘೋಷಿಸಿ ಶಿಕ್ಷೆಯ ಪ್ರಮಾಣವನ್ನು ಸೋಮವಾರ ಪ್ರಕಟಿಸುವುದಾಗಿ ತಿಳಿಸಿದ್ದರು.
ಅದರಂತೆ ಸೋಮವಾರ ಈ ತೀರ್ಪು ಹೊರಬಿದ್ದಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು 19 ಸಾಕ್ಷಿಗಳ ವಿಚಾರಣೆ ನಡೆಸಿದ್ದು, 36 ದಾಖಲೆಗಳನ್ನು ಪರಿಶೀಲಿಸಿತ್ತು. ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತಾ ಪ್ರಾಸಿಕ್ಯೂಶನ್ ಪರವಾಗಿ ವಾದಿಸಿದ್ದರು.







