ಆಶ್ರಯ ಯೋಜನೆಯಡಿ ಹೊಸ ಅರ್ಜಿ: ಸದಸ್ಯರ ಆಕ್ರೋಶ
ಮಹಾನಗರ ಪಾಲಿಕೆ ಸಾಮಾನ್ಯ ಸಭೆ

ಶಿವಮೊಗ್ಗ, ಡಿ. 18: ಹಳೆಯ ಅರ್ಜಿಗಳ ಬಾಕಿ ಉಳಿಸಿಕೊಂಡು ಆಶ್ರಯ ಸಮಿತಿ ಹೊಸದಾಗಿ ಬಡವರಿಗೆ ಮನೆ ನೀಡಲು ಅರ್ಜಿ ಕರೆದಿರುವುದಕ್ಕೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಸೋಮವಾರ ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು. ಆಶ್ರಯ ಸಮಿತಿ ಈ ಹಿಂದೆ ಗೋಪಿಶೆಟ್ಟಿಕೊಪ್ಪಮತ್ತು ಗೋವಿಂದಪುರಗಳಲ್ಲಿ ಆಶ್ರಯ ನಿವೇಶನ ನೀಡಲು ಅರ್ಜಿ ಕರೆದಿದ್ದಾಗ 17 ಸಾವಿರ ಜನರು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕಾಗಿ ಹಗಲು ರಾತ್ರಿ ಎನ್ನದೆ ಪಾಲಿಕೆ ಬಳಿ ಸರದಿನಿಂತು ಹಣ ಖರ್ಚು ಮಾಡಿಕೊಂಡು ನಿವೇಶನಕ್ಕಾಗಿ ಕಾಯುತ್ತಿದ್ದವರಿಗೆ ಹೊಸದಾಗಿ ಅರ್ಜಿ ಸಲ್ಲಿಸುವ ಆಶ್ರಯ ಸಮಿತಿ ಸೂಚನೆಯಿಂದ ಜನರು ಗೊಂದಲಕ್ಕೀಡಾಗಿದ್ದಾರೆ ಎಂದು ಸದಸ್ಯರು ಅಭಿಪ್ರಾಯಪಟ್ಟರು.
ಜಿ ಪ್ಲಸ್ 2 ಮಾದರಿಯ ಆಶ್ರಯ ಮನೆಗಳ ವಿತರಣೆಯಲ್ಲಿ ಆಶ್ರಯ ಸಮಿತಿಗೆ 6 ವರ್ಷಗಳ ಹಿಂದೆ ನಗರದ ಬಡವರು ಸಲ್ಲಿಸಿದ್ದ ಅರ್ಜಿಗಳಿಗೆ ಮೊದಲ ಆದ್ಯತೆ ನೀಡಬೇಕು ಹಾಗೂ ಈ ಆಶ್ರಯ ಮನೆಗೆ ಅರ್ಜಿ ಹಾಕುವಾಗ 8 ಸಾವಿರ ರೂ. ಮುಂಗಡ ಹಣ ಪಡೆಯದಿರಲು ಇಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಆಶ್ರಯ ಸಮಿತಿಗೆ ಕಳುಹಿಸಲು ನಿರ್ಣಯಿಸಲಾಯಿತು.
ಸದಸ್ಯ ಮೋಹನ ರೆಡ್ಡಿ ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿ, 17 ಸಾವಿರ ಜನ ಅರ್ಜಿದಾರರು ಮತ್ತೆ ಅರ್ಜಿ ಸಲ್ಲಿಸುವುದು ಎಷ್ಟು ಸರಿ ಎಂದರು. ಸದಸ್ಯರಾದ ಸುಭಾಷ್, ನಾಗರಾಜ್ ಕಂಕಾರಿ, ಪಾಲಾಕ್ಷಿ, ನರಸಿಂಹಮೂರ್ತಿ, ರಮೇಶ್ ಸೇರಿದಂತೆ ಅನೇಕರು ಹೊಸದಾಗಿ ಆಶ್ರಯ ಸಮಿತಿ ಅರ್ಜಿ ಕರೆದಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು.
ಪಾಲಿಕೆಯ 35 ಸದಸ್ಯರು ಈ ಹಿಂದೆ ತಮ್ಮ ಬಡಾವಣೆಯ ಬಡವರಿಗೆ ನಿವೇಶನ ಕೊಡಿಸಲು ಅರ್ಜಿ ಹಾಕಿಸಿ, ಅವರ ಅರ್ಜಿ ಪರಿಶೀಲನೆಯನ್ನು ಮಾಡಿಸಿ ನಿವೇಶನ ಕೊಡಿಸುವ ಭರವಸೆ ನೀಡಿದ್ದೆವು. ಈಗ ಅವರಿಗೆ ಅನ್ಯಾಯವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. 8,200ರೂ.ನ್ನು ಅರ್ಜಿಯೊಂದಿಗೆ ಕಟ್ಟುವುದನ್ನು ಕೈಬಿಡಬೇಕು. ಫಲಾನುಭವಿಯಾಗಿ ಆಯ್ಕೆಯಾದ ನಂತರವಷ್ಟೇ ಹಣ ಕಟ್ಟುವ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದರು.
ಮೇಯರ್ ಏಳುಮಲೈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಮೇಯರ್ ರೂಪಾ ಲಕ್ಷ್ಮಣ್, ಆಯುಕ್ತ ಮುಲ್ಲೈ ಮುಹಿಲನ್ ಉಪಸ್ಥಿತರಿದ್ದರು. .
ಗಂಭೀರ ಚರ್ಚೆ........
ಆಶ್ರಯ ಸಮಿತಿ ಸಭೆಗೆ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಅವರನ್ನು ಆಹ್ವಾನಿಸದಿರುವುದು ಪಾಲಿಕೆ ಸಭೆಯಲ್ಲಿ ಗಂಭೀರ ಚರ್ಚೆಗೆ ಎಡೆಮಾಡಿ ಕೊಟ್ಟಿತು. ಆಶ್ರಯ ಸಮಿತಿ ಮನೆ ನೀಡಲು ಅರ್ಜಿ ಕರೆದಿರುವ ಬಗ್ಗೆ ವಿಪ ಸದಸ್ಯ ಆರ್. ಪ್ರಸನ್ನಕುಮಾರ್ ಅವರಲ್ಲಿ ಸದಸ್ಯ ಸುಭಾಶ್ ಮಾಹಿತಿ ಕೇಳಿದಾಗ, ತನಗೆ ಸಭೆಗೆ ಆಹ್ವಾನ ನೀಡಿಲ್ಲ ಎಂದು ಅವರು ಅಧಿಕಾರಿಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಆಯುಕ್ತರು, ಆಶ್ರಯ ಸಮಿತಿಯಲ್ಲಿ ಒಬ್ಬರೇ ವಿಧಾನ ಪರಿಷತ್ ಸದಸ್ಯರಿರಬೇಕು. ಈಗಾಗಲೇ ಶಂಕರಮೂರ್ತಿ ಇದ್ದಾರೆ. ಮತ್ತೊಬ್ಬರು ಇದೇ ಸಮಿತಿ ಸದಸ್ಯರಾಗಲು ಬಯಸಿ ನಮಗೆ ಒಪ್ಪಿಗೆ ಪತ್ರ ನೀಡಿದಲ್ಲಿ ಸರಕಾರಕ್ಕೆ ಕಳುಹಿಸುತ್ತೇವೆ. ಅವರು ಆಯ್ಕೆ ಮಾಡಿದ ಒಬ್ಬರು ವಿಧಾನಪರಿಷತ್ ಸದಸ್ಯರು ಸಮಿತಿ ಸದಸ್ಯರಾಗುತ್ತಾರೆ ಎಂದರು.







