ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರಗತಿಪರ ಸಂಘಟನೆ ಧರಣಿ: ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ

ಚಿಕ್ಕಮಗಳೂರು, ಡಿ.18: ವಸ್ತಾರೆ ಬಳಿಯ ಮೈಲಿಮನೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ತಕ್ಷಣ ದುರಸ್ತಿಪಡಿಸಿ ಕಾಂಕ್ರಿಟೀಕರಣ ಮಾಡಬೇಕು ಎಂದು ಒತ್ತಾಯಿಸಿ ದಲಿತ, ಪ್ರಗತಿಪರ ಯುವಜನ ಸಂಘಟನೆ ಕಾರ್ಯಕರ್ತರು ಸೋಮವಾರ ನಗರದಲ್ಲಿ ಧರಣಿ ನಡೆಸಿ ಜಿಪಂ ಸಿಇಒಗೆ ಮನವಿ ಸಲ್ಲಿಸಿದರು.
ಮೈಲಿಮನೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗಡಬನಹಳ್ಳಿ ಗ್ರಾಮವು ಚಿಕ್ಕಮಗಳೂರು ನಗರದಿಂದ ಕೇವಲ 5 ಕಿ.ಮೀ. ದೂರದಲ್ಲಿದೆ. ಸುಮಾರು 60ರಿಂದ 70 ಮನೆಗಳನ್ನು ಹೊಂದಿರುವ ಈ ಗ್ರಾಮಕ್ಕೆ ಮುಖ್ಯ ರಸ್ತೆಯಿಂದ ಗ್ರಾಮದ ಒಳಕ್ಕೆ ಹಾದು ಹೋಗಿರುವ ಕಚ್ಚಾ ರಸ್ತೆಯು ಗುಂಡಿ, ಗೊಟರುಗಳಿಂದ ಕೂಡಿದ್ದು ವಾಹನಗಳು ತಿರುಗಾಡದಂತಹ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಕೆಲವರು ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಚಿಕ್ಕಮಗಳೂರು ನಗರದ ಶಾಲೆಗೆ ಬಂದು ಹೋಗುವ ಮಕ್ಕಳಿಗೆ ಸೈಕಲ್‌ಗಳಲ್ಲಿ ತಿರುಗಾಡದಂತಾಗಿದೆ ಎಂದು ದೂರಿದ್ದಾರೆ.
ಈಗಾಗಲೇ ಈ ರಸ್ತೆ ದುರಸ್ತಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ, ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸುಮಾರು 3 ಕಿ.ಮೀ ಮುಖ್ಯ ರಸ್ತೆಯಿಂದ ಸಾಮಾನು ಸರಂಜಾಮುಗಳನ್ನು ತಲೆ ಮೇಲೆ ಹೊತ್ತುಕೊಂಡು ಈ ಕಚ್ಚಾ ರಸ್ತೆಯಲ್ಲಿಯೇ ಸಾಗಬೇಕು. ಆದ್ದರಿಂದ ಕೂಡಲೇ ರಸ್ತೆಗೆ ಕಾಂಕ್ರೀಟ್ ಹಾಕಿ ರಸ್ತೆ ದುರಸ್ತಿ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಈ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಬಹಿಷ್ಕರಿಸುವ ತೀರ್ಮಾನ ಕೈಗೊಳ್ಳುವುದಲ್ಲದೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಧರಣಿನಿರತರು ನಗರದ ತಾಲೂಕು ಕಚೇರಿಯಿಂದ ಆಝಾದ್ ಪಾರ್ಕ್‌ವರೆಗೆ ಮೆರವಣಿಗೆ ಸಾಗಿ ಪಾರ್ಕ್‌ನಲ್ಲಿ ಸಭೆ ನಡೆಸಿದರು. ಈ ವೇಳೆ ಉಮೇಶ್, ರಮೇಶ್, ಲತಾ, ಜಿ.ಎನ್.ವೆಂಟೇಶ್, ದೇವಯ್ಯ, ಶಂಕರಯ್ಯ ಮತ್ತಿತರರಿದ್ದರು.







