ರೈತ ಸಂಘಟನೆಗಳಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ
ಭದ್ರಾ ಮೇಲ್ದಂಡೆ ಯೋಜನೆಯ ಮಾರ್ಗ ಬದಲಾವಣೆಗೆ ವಿರೋಧ

ಚಿತ್ರದುರ್ಗ, ಡಿ.18: ಜಿಲ್ಲೆಯ ರೈತರ ಬಹುದಿನಗಳ ಕನಸಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಮಾರ್ಗ ಬದಲಾವಣೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಮತ್ತು ಕಾತ್ರಾಳು ಕೆರೆ ಅಚ್ಚುಕಟ್ಟು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಭದ್ರಾ ಮೇಲ್ದಂಡೆ ಯೋಜನೆಯಡಿ ಈ ಮೊದಲು ಕಾತ್ರಾಳು ಕೆರೆ ಮೂಲಕ ಸಂಗೇನಹಳ್ಳಿ ಕೆರೆಗೆ ನೀರು ಹರಿಸಿ ಅಲ್ಲಿಂದ ಜಗಳೂರು ಪ್ರದೇಶವನ್ನು ನೀರಾವರಿ ವ್ಯಾಪ್ತಿಗೆ ತರಲು ನೀರಾವರಿ ತಜ್ಞ ಎನ್.ಡಿ.ದೇಸಾಯಿ ಯೋಜನೆ ರೂಪಿಸಿದ್ದರು.
ಕಾತ್ರಾಳು ಕೆರೆ ಕೋಡಿ ಬಿದ್ದರೆ ನೈಸರ್ಗಿಕ ಮಾರ್ಗದ ಮೂಲಕ ರಂಗಯ್ಯನದುರ್ಗ ಜಲಾಶಯಕ್ಕೆ ಹರಿದು ಹೋಗುತ್ತದೆ. ಐಮಂಗಲ ಮೂಲಕ ಹಾದುಬರುವ ಚಿತ್ರದುರ್ಗ ಬ್ರಾಂಚ್ ಕಾಲುವೆಯಿಂದ ನೀರು ಪಡೆದು ಕಾತ್ರಾಳು ಕೆರೆ ತುಂಬಿಸುವ ಉದ್ದೇಶಕ್ಕೆ ಈಗ ಜಗಳೂರು ರೈತರು ಅಪಸ್ವರ ಎತ್ತುತ್ತಿದ್ದಾರೆ. ಕಾತ್ರಾಳು ಕೆರೆ ಮೂಲಕ ಸಂಗೇನಹಳ್ಳಿ ಕೆರೆಗೆ ನೀರು ಹರಿಸಿದರೆ ತಮಗೆ ನೀರು ಸಿಗುವುದಿಲ್ಲ. ಹಾಗಾಗಿ ಬೆಳಗಟ್ಟ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಸೀಳಿ ನೇರವಾಗಿ ಸಂಗೇನಹಳ್ಳಿ ಕೆರೆಗೆ ನೀರು ಹಾಯಿಸುವಂತೆ ಜಗಳೂರು ಪ್ರದೇಶದ ರೈತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ಒತ್ತಡ ಹೇರಿದ್ದಾರೆ. ಯಾವುದೇ ಕಾರಣಕ್ಕೂ ಭದ್ರಾ ಮೇಲ್ದಂಡೆ ಯೋಜನೆ ಮಾರ್ಗ ಬದಲಾವಣೆಯಾಗಲು ಬಿಡುವುದಿಲ್ಲ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಮಾರ್ಗ ಬದಲಾವಣೆಯಾಗದಂತೆ ಮುಖ್ಯಮಂತ್ರಿ ಬಳಿ ನಿಯೋಗ ಹೋಗುವುದಲ್ಲದೆ ಹೆದ್ದಾರಿಯನ್ನು ಬಂದ್ ಮಾಡಬೇಕಾಗಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಜಮಾವಣೆಯಾಗಬೇಕು. ಕಾತ್ರಾಳು ಕೆರೆ ನೀರು ಜಗಳೂರಿಗೆ ಹೋಗಲು ನಮ್ಮದು ವಿರೋಧವಿಲ್ಲ. ಆದರೆ ಮಾರ್ಗ ಬದಲಾವಣೆಗೆ ತಾವು ಬಿಡುವುದಿಲ್ಲ. ಇದರಿಂದ ಸುತ್ತಮುತ್ತಲಿನ ತೋಟಗಳು ಮತ್ತು ಬೋರ್‌ವೆಲ್‌ಗಳು ಒಣಗುತ್ತವೆ ಎಂದು ರೈತ ಮುಖಂಡ ಬಸ್ತಿಹಳ್ಳಿ ಸುರೇಶ್‌ಬಾಬು ಹೇಳಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ನುಲೇನೂರು ಶಂಕರಪ್ಪ, ಕೆ.ಸಿ.ಹೊರಕೇರಪ್ಪ, ಕೆ.ಪಿ.ಭೂತಯ್ಯ, ಬಿ.ಟಿ.ಹನುಮಂತಪ್ಪ, ಎಂ.ಬಿ.ತಿಪ್ಪೇಸ್ವಾಮಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು







