ಕರುಣ್ ನಾಯರ್ ಶತಕ: ಕರ್ನಾಟಕ ಮೇಲುಗೈ
ರಣಜಿ ಸೆಮಿಫೈನಲ್

ಕೋಲ್ಕತಾ, ಡಿ.18: ಉಪ ನಾಯಕ ಕರುಣ್ ನಾಯರ್ ಭರ್ಜರಿ ಶತಕದ(ಔಟಾಗದೆ 148,261 ಎಸೆತ, 20 ಬೌಂಡರಿ, 1 ಸಿಕ್ಸರ್)ಸಹಾಯದಿಂದ ಮಾಜಿ ಚಾಂಪಿಯನ್ ಕರ್ನಾಟಕ ತಂಡ ವಿದರ್ಭ ವಿರುದ್ಧದ ರಣಜಿ ಟ್ರೋಫಿ ಎರಡನೇ ಸೆಮಿಫೈನಲ್‌ನಲ್ಲಿ ಉತ್ತಮ ಸ್ಥಿತಿಯಲ್ಲಿದೆ.
ಕರ್ನಾಟಕ ಸೋಮವಾರ ಎರಡನೇ ದಿನದಾಟದಂತ್ಯಕ್ಕೆ 8 ವಿಕೆಟ್‌ಗಳ ನಷ್ಟಕ್ಕೆ 294 ರನ್ ಗಳಿಸಿದ್ದು, ಒಟ್ಟು 109 ರನ್ ಮುನ್ನಡೆಯಲ್ಲಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಆಗಿರುವ ನಾಯರ್ ಅವರು ನಾಯಕ ವಿನಯ್‌ಕುಮಾರ್(ಅಜೇಯ 20)ಅವರೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಇಬ್ಬರು 9ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 69 ರನ್ ಸೇರಿಸಿ ತಂಡದ ಮುನ್ನಡೆಯನ್ನು 100ರ ಗಡಿ ದಾಟಿಸಿದರು.
ಕ್ರೀಸ್‌ಗೆ ಅಂಟಿಕೊಂಡು ಆಡುತ್ತಿರುವ ನಾಯರ್ 8 ಬಾರಿಯ ಚಾಂಪಿಯನ್ ಕರ್ನಾಟಕ 5 ವರ್ಷಗಳಲ್ಲಿ ಮೂರನೇ ಬಾರಿ ಫೈನಲ್‌ಗೆ ತಲುಪಿಸಲು ಶ್ರಮಿಸುತ್ತಿದ್ದಾರೆ. ನಾಯರ್ 181 ಎಸೆತಗಳಲ್ಲಿ ಈ ವರ್ಷ ಮೂರನೇ ಹಾಗೂ ಒಟ್ಟಾರೆ 13ನೇ ಶತಕ ದಾಖಲಿಸಿದ್ದಾರೆ.
ವಿದರ್ಭ ಪರ ರಜನೀಶ್ ಗುರ್ಬಾನಿ ಸತತ ಮೂರನೇ ಬಾರಿ ಐದು ವಿಕೆಟ್(5-90)ಗೊಂಚಲು ಕಬಳಿಸಿದ್ದಾರೆ. ದಕ್ಷಿಣ ಆಫ್ರಿಕ ಪ್ರವಾಸಕ್ಕೆ ಸಜ್ಜಾಗುತ್ತಿರುವ ಭಾರತದ ಪ್ರಮುಖ ಬೌಲರ್ ಉಮೇಶ್ ಯಾದವ್(2-71) ಎರಡು ವಿಕೆಟ್ ಪಡೆದಿದ್ದಾರೆ.
3 ವಿಕೆಟ್‌ಗಳ ನಷ್ಟಕ್ಕೆ 36 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕಕ್ಕೆ ನಾಯರ್ ಹಾಗೂ ಸಿ.ಎಂ. ಗೌತಮ್ (73,125 ಎಸೆತ, 8 ಬೌಂಡರಿ) ಆಸರೆಯಾದರು. ಈ ಜೋಡಿ 4ನೇ ವಿಕೆಟ್‌ಗೆ 139 ರನ್ ಜೊತೆಯಾಟ ನಡೆಸಿತು. ಯಾದವ್ ವಿಕೆಟ್‌ಕೀಪರ್ ಗೌತಮ್ ವಿಕೆಟ್ ಕಬಳಿಸುವ ಮೂಲಕ ಶತಕದ ಜೊತೆಯಾಟವನ್ನು ಮುರಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಕರ್ನಾಟಕ ಕುಸಿತದ ಹಾದಿ ಹಿಡಿಯಿತು. ಸ್ಟುವರ್ಟ್ ಬಿನ್ನಿ(4), ಶ್ರೇಯಸ್ ಗೋಪಾಲ್(7) ಹಾಗೂ ಕೆ.ಗೌತಮ್(1) ಅಲ್ಪ ಮೊತ್ತಕ್ಕೆ ಔಟಾದರು.
ಸಂಕ್ಷಿಪ್ತ ಸ್ಕೋರ್
►ವಿದರ್ಭ ಮೊದಲ ಇನಿಂಗ್ಸ್:185 ರನ್‌ಗೆ ಆಲೌಟ್
►ಕರ್ನಾಟಕ ಪ್ರಥಮ ಇನಿಂಗ್ಸ್: 294/8
(ಕರುಣ್ ನಾಯರ್ ಅಜೇಯ 148, ರಜನೀಶ್ 2-9)







