ರಣಜಿ: 6,000 ರನ್ ಪೂರೆಸಿದ ಗಂಭೀರ್
ಹೊಸದಿಲ್ಲಿ, ಡಿ.18: ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರುವ ಗೌತಮ್ ಗಂಭೀರ್ ಪ್ರಸ್ತುತ ದಿಲ್ಲಿ ಪರ ಪ್ರಥಮ ದರ್ಜೆ ಪಂದ್ಯಗಳನ್ನು ಆಡುತ್ತಿದ್ದು, ಈಗ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಸೆಮಿಫೈನಲ್‌ಗೆ ಮೊದಲು ಎರಡು ಶತಕಗಳನ್ನು ಸಿಡಿಸಿದ್ದ ಗಂಭೀರ್ ಬಂಗಾಳ ವಿರುದ್ಧ ರವಿವಾರ ಆರಂಭವಾದ ಸೆಮಿಫೈನಲ್ ಪಂದ್ಯದ ಎರಡನೇ ದಿನವಾದ ಸೋಮವಾರ ಮತ್ತೊಂದು ಶತಕ ಸಿಡಿಸಿದರು. ದಿಲ್ಲಿ ತಂಡದ ಪರ 6,000ರನ್ ಗಳಿಸಿರುವ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.
ಗಂಭೀರ್ ಹಾಗೂ ಕುನಾಲ್ ಚಾಂಡೇಲ(113) ಶತಕದ ಸಹಾಯದಿಂದ ದಿಲ್ಲಿ 2ನೇ ದಿನದಾಟದಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 271 ರನ್ ಗಳಿಸಿತು.
ದಿನದಾಟದಂತ್ಯಕ್ಕೆ ಗಂಭೀರ್ ಅಜೇಯ 127 ರನ್(216 ಎಸೆತ, 21 ಬೌಂಡರಿ) ಗಳಿಸಿದ್ದು ಆರಂಭಿಕ ಆಟಗಾರ ಚಂಡೇಲರೊಂದಿಗೆ ಮೊದಲ ವಿಕೆಟ್‌ಗೆ 232 ರನ್ ಜೊತೆಯಾಟ ನಡೆಸಿದ್ದಾರೆ. ಗಂಭೀರ್ ಈ ಋತುವಿನಲ್ಲಿ ಮೂರನೇ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 42ನೇ ಶತಕ ದಾಖಲಿಸಿದ್ದಾರೆ.
ದಿಲ್ಲಿ ರಣಜಿ ತಂಡದ ಪರ ಶತಕ ದಾಖಲಿಸಿರುವ ಇತರ ಮೂವರು ಬ್ಯಾಟ್ಸ್‌ಮನ್‌ಗಳೆಂದರೆ: ಮಿಥುನ್ ಮನ್ಹಾಸ್, ಅಜಯ್ ಶರ್ಮ ಹಾಗೂ ರಮಣ್ ಲಾಂಬಾ. ಮನ್ಹಾಸ್ ದಿಲ್ಲಿ ಪರ ಗರಿಷ್ಠ ರನ್(7,911) ದಾಖಲಿಸಿದ್ದಾರೆ.
ಬಂಗಾಳ ತಂಡ ಮೊದಲ ಇನಿಂಗ್ಸ್‌ನಲ್ಲಿ 286 ರನ್ ಗಳಿಸಿ ಆಲೌಟಾಗಿದೆ.









