ಜೆರುಸಲೇಂ ನಿರ್ಧಾರ ತಿರಸ್ಕರಿಸುವ ವಿಶ್ವಸಂಸ್ಥೆ ನಿರ್ಣಯಕ್ಕೆ ವೀಟೊ ಚಲಾಯಿಸಿದ ಅಮೆರಿಕ

ವಿಶ್ವಸಂಸ್ಥೆ, ಡಿ. 19: ಜೆರುಸಲೇಂನ್ನು ಇಸ್ರೇಲ್‌ನ ರಾಜಧಾನಿಯಾಗಿ ಮಾನ್ಯ ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿರ್ಧಾರವನ್ನು ತಿರಸ್ಕರಿಸುವ ವಿಶ್ವಸಂಸ್ಥೆಯ ಕರಡು ನಿರ್ಣಯವೊಂದಕ್ಕೆ ಅಮೆರಿಕ ಸೋಮವಾರ ವೀಟೊ ಚಲಾಯಿಸಿದೆ.
ಆದಾಗ್ಯೂ, ಈ ನಿರ್ಣಯಕ್ಕೆ 15 ಸದಸ್ಯರ ಭದ್ರತಾ ಮಂಡಳಿಯ ಇತರ ಎಲ್ಲ 14 ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ.
ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ನಿಕ್ಕಿ ಹೇಲಿ ನಿರ್ಣಯಕ್ಕೆ ವೀಟೊ ಚಲಾಯಿಸಿದರು.
ಇಸ್ರೇಲ್‌ಗೆ ಅಮೆರಿಕದ ರಾಯಭಾರ ಕಚೇರಿಯನ್ನು ಈಗಿನ ಟೆಲ್ ಅವೀವ್‌ನಿಂದದ ಜೆರುಸಲೇಂಗೆ ಸ್ಥಳಾಂತರಿಸುವುದಾಗಿ ಅಮೆರಿಕದ ಅಧ್ಯಕ್ಷರು ಇತ್ತೀಚೆಗೆ ಘೋಷಿಸಿದ್ದರು. ಆ ಮೂಲಕ, ಜೆರುಸಲೇಂನ್ನು ಇಸ್ರೇಲ್ ರಾಜಧಾನಿ ಎಂಬುದಾಗಿ ಟ್ರಂಪ್ ಮಾನ್ಯ ಮಾಡಿದ್ದರು.
‘‘ತನ್ನ ರಾಯಭಾರಿಯನ್ನು ಅಮೆರಿಕ ಎಲ್ಲಿ ನಿಯೋಜಿಸಬೇಕು ಎಂಬುದನ್ನು ಅದಕ್ಕೆ ಯಾರೂ ಹೇಳುವಂತಿಲ್ಲ’’ ಎಂದು ವೀಟೊ ಚಲಾಯಿಸಿದ ಬಳಿಕ ಭದ್ರತಾ ಮಂಡಳಿ ಸಭೆಯಲ್ಲಿ ಹೇಲಿ ನುಡಿದರು.
ಜೆರುಸಲೇಂ ಇಸ್ರೇಲ್ ಮತ್ತು ಫೆಲೆಸ್ತೀನೀಯರ ನಡುವಿನ ಮಾತುಕತೆ ಮೂಲಕ ಬಗೆಹರಿಯಬೇಕಾದ ವಿಷಯವಾಗಿದೆ ಎಂದು ವಿಶ್ವಸಂಸ್ಥೆಯ ನಿರ್ಣಯ ಹೇಳುತ್ತದೆ. ‘ಜೆರುಸಲೇಂನ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ತೆಗೆದುಕೊಳ್ಳಲಾಗಿರುವ ನಿರ್ಧಾರಗಳ’ ಬಗ್ಗೆ ನಿರ್ಣಯ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ. ಆದಾಗ್ಯೂ, ನಿರ್ಣಯವು ಟ್ರಂಪ್ ನಿರ್ಧಾರವನ್ನು ನೇರವಾಗಿ ಪ್ರಸ್ತಾಪಿಸುವುದಿಲ್ಲ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಲಾಗುವ ಯಾವುದೇ ನಿರ್ಧಾರ ಅಂಗೀಕಾರಗೊಳ್ಳಬೇಕಾದರೆ 15 ಸದಸ್ಯರ ಪೈಕಿ ಒಂಬತ್ತು ಸದಸ್ಯರ ಅನುಮೋದನೆ ಬೇಕಾಗುತ್ತದೆ. ಅದೇ ವೇಳೆ, ಅಮೆರಿಕ, ರಶ್ಯ, ಚೀನಾ, ಬ್ರಿಟನ್, ಫ್ರಾನ್ಸ್- ಈ ಐದು ವಿಶೇಷ ವೀಟೊ ಅಧಿಕಾರ ಹೊಂದಿರುವ ದೇಶಗಳು ವೀಟೊ ಚಲಾಯಿಸಿ ಯಾವುದೇ ನಿರ್ಣಯವನ್ನು ತಡೆಹಿಡಿಯಬಹುದಾಗಿದೆ.
ನಿರ್ಣಯಕ್ಕೆ ಅಮೆರಿಕದ ಮಿತ್ರ ದೇಶಗಳ ಬೆಂಬಲ
ಜೆರುಸಲೇಂ ಸ್ಥಾನಮಾನದ ಬಗ್ಗೆ ತೆಗೆದುಕೊಳ್ಳಲಾದ ಯಾವುದೇ ನಿರ್ಧಾರವು, ‘ಯಾವುದೇ ಕಾನೂನು ಮಾನ್ಯತೆಯನ್ನು ಹೊಂದಿರುವುದಿಲ್ಲ, ಅದರ ಪರಿಣಾಮವು ಶೂನ್ಯವಾಗಿದೆ ಹಾಗೂ ಅದನ್ನು ಹಿಂದಕ್ಕೆ ಪಡೆದುಕೊಳ್ಳಬೇಕು’ ಎಂದು ಹೇಳುವ ನಿರ್ಣಯದ ಪರವಾಗಿ ಅಮೆರಿಕದ ಮಿತ್ರ ದೇಶಗಳಾದ ಬ್ರಿಟನ್, ಫ್ರಾನ್ಸ್, ಇಟಲಿ, ಜಪಾನ್ ಮತ್ತು ಯುಕ್ರೇನ್‌ಗಳು ಮತ ಹಾಕಿವೆ.







