ಕೇಂದ್ರದಿಂದ ಶೇಂಗಾಕ್ಕೆ 4450 ರೂ. ಬೆಂಬಲ ಬೆಲೆ ನಿಗದಿ: ಡಿಸಿ ರಮೇಶ್
ದಾವಣಗೆರೆ, ಡಿ.19: ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಪ್ರತಿ ಕ್ವಿಂಟಾಲ್‌ಗೆ 4450 ರೂ. ನಂತೆ ಶೇಂಗಾ ಉತ್ಪನ್ನ ಖರೀದಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
ಇತ್ತೀಚೆಗೆ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕೇಂದ್ರ ಸರಕಾರದ ಬೆಂಬಲೆ ಬೆಲೆ ಯೋಜನೆ ಅನುಷ್ಠಾನ ಕುರಿತು ಕರೆಯಲಾಗಿದ್ದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿಯನ್ನು(ಕೆಒಎಫ್) ರಾಜ್ಯ ಮಟ್ಟದ ಖರೀದಿ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ. ಈ ಏಜೆನ್ಸಿ ಮೂಲಕ ದಾವಣಗೆರೆ ಮತ್ತು ಜಗಳೂರು ಖರೀದಿ ಕೇಂದ್ರಗಳಲ್ಲಿ ಎಫ್‌ಎಕ್ಯೂ ಗುಣಮಟ್ಟದ ಶೇಂಗಾವನ್ನು ರೈತರಿಂದ ಖರೀದಿಸುವ ಪ್ರಕ್ರಿಯೆ ಈಗಾಗಲೇ ಆರಂಭಿಸಲಾಗಿದ್ದು, ಜ.6 ಕೊನೆಯದಿನವಾಗಿದೆ.
ಪ್ರತಿ ಕ್ವಿಂಟಾಲ್‌ಗೆ ರೂ. 200 ಪ್ರೋತ್ಸಾಹಧನ ಸೇರಿದಂತೆ ಒಟ್ಟು 4450 ರೂ. ಬೆಂಬಲ ಬೆಲೆ ಘೋಷಿಸಿದೆ. ಪ್ರಸ್ತುತ ಮಾರುಕಟ್ಟೆ ದರ ಕನಿಷ್ಠ ರೂ.3,000 ದಿಂದ ರೂ. 3,500 ಇದ್ದು, ಬೆಂಬಲ ಬೆಲೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಪ್ರತಿ ರೈತರಿಂದ ಗರಿಷ್ಟ 15 ಕ್ವಿಂಟಾಲ್ ಶೇಂಗಾ ಖರೀದಿಯನ್ನು ನಿಗದಿಪಡಿಸಲಾಗಿದೆ. ಖರೀದಿ ಪೂರ್ವದಲ್ಲಿ ಪಹಣಿ ಪತ್ರವನ್ನು ಕಡ್ಡಾಯವಾಗಿ ರೈತರು ನೀಡಬೇಕು. ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಉತ್ಪನ್ನದ ವೌಲ್ಯವನ್ನು ಎಇಪಿಎಸ್ ಮೂಲಕ ಜಮಾ ಆಗುವಂತೆ ಪಾವತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಎಪಿಎಂಸಿ ಸಹಾಯಕ ನಿರ್ದೇಶಕಿ ಮಂಜುಳಾ ದೇವಿ, ಎಪಿಎಂಸಿ ಕಾರ್ಯದರ್ಶಿ ಬಿ. ಆನಂದ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ. ಸದಾಶಿವ, ಕೆಎಫ್‌ಒ ಪ್ರಬಂಧಕ ಹನುಮಂತ ನಾಯಕ, ತಾಲೂಕುಗಳಎಪಿಎಂಸಿ ಕಾರ್ಯದರ್ಶಿಗಳು, ಸಹಾಯಕ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.







