ಪ್ರವಾಸಿಗರಿಗೆ ಉತ್ತಮ ಸೇವೆ ಒದಗಿಸಲು ಆದ್ಯತೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು, ಡಿ. 19: ಪ್ರವಾಸಿಗರಿಗೆ ಶುಚಿಯಾದ ಆಹಾರ, ಅಗತ್ಯ ಆರೋಗ್ಯ ಸೇವೆ ಹಾಗೂ ಶೌಚಾಲಯ ಸೇರಿ ಮೂಲ ಸೌಲಭ್ಯ ಕಲ್ಪಿಸಲು ಕಲಬುರ್ಗಿ, ಚಿತ್ರದುರ್ಗ ಸೇರಿ ರಾಜ್ಯದ 12 ಕಡೆಗಳಲ್ಲಿ ರಸ್ತೆಬದಿಯಲ್ಲಿ ಸೌಲಭ್ಯ ಕೇಂದ್ರ ಸ್ಥಾಪಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ಎರಡು ಎಕರೆ ಪ್ರದೇಶದಲ್ಲಿ ಈ ಸೌಲಭ್ಯ ಕೇಂದ್ರಗಳು ತಲೆ ಎತ್ತಲಿದ್ದು, ಈಗಾಗಲೇ ಸರಕಾರಿ ಜಮೀನು ಗುರುತಿಸಲಾಗಿದೆ.ಅಲ್ಲದೆ, ಈ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ದಿನದ 24 ಗಂಟೆಗಳ ಕಾಲ ಈ ಕೇಂದ್ರ ಗಳಲ್ಲಿ ಸೇವೆ ದೊರೆಯಲಿದೆ. ಸದ್ಯ ವಸತಿ ಸೌಲಭ್ಯ ಇರುವುದಿಲ್ಲ, ಮುಂದಿನ ದಿನಗಳಲ್ಲಿ ವಸತಿಗೃಹ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸುತ್ತೇವೆ ಎಂದ ಅವರು, ನಿರ್ವಹಣೆಯನ್ನು ಖಾಸಗಿಯವರಿಗೆ ಹಿಸುತ್ತೇವೆ. ಯುರೋಪ್, ಅಮೆರಿಕಾದಲ್ಲಿ ಇಂತಹ ಕೇಂದ್ರಗಳಿದ್ದು, ನಮ್ಮ ದೇಶದಲ್ಲಿಯೂ ಸಕಾರದಿಂದ ಇಂತಹ ಸೌಲಭ್ಯ ಕಲ್ಪಿಸುತ್ತಿರುವ ಮೊದಲ ರಾಜ್ಯ ಕರ್ನಾಟಕ ಎಂಬುದು ನಮ್ಮ ಹೆಗ್ಗಳಿಕೆ ಎಂದು ಹೇಳಿದರು.
ರಾಜ್ಯದಲ್ಲಿ ಇಂತಹ ಪ್ರಥಮ ಸೌಲಭ್ಯ ಕೇಂದ್ರ ಕಲಬುರ್ಗಿ ಜಿಲ್ಲೆಯ ಸೇಡಂ ರಸ್ತೆಯ ಮಾಡಬೂಳ ಪೊಲೀಸ್ ಠಾಣೆ ಪಕ್ಕದ ಎರಡೂವರೆ ಎಕರೆಯಲ್ಲಿ 2.5 ಕೋಟಿ ರೂ.ವೆಚ್ಚದಲ್ಲಿ ತಲೆ ಎತ್ತಲಿದೆ. 2018ರ ಜನವರಿ 26ರ ವೇಳೆಗೆ ಕಾಮಗಾರಿ ಆರಂಭವಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ನುಡಿದರು.
ಚಿತ್ರದುರ್ಗ, ಕಲಬುರಗಿ, ಹಾಸನ, ಉತ್ತರ ಕನ್ನಡ, ಕೊಡಗು, ಮೈಸೂರು, ತುಮಕೂರ, ವಿಜಯಪುರ ಸೇರಿ ರಾಜ್ಯದ 12 ಪ್ರಮುಖ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದ ಅವರು, ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸರಕಾರ ಕ್ರಮ ವಹಿಸಲಿದೆ ಎಂದರು.







