ವಾಟ್ಸ್‌ಆ್ಯಪ್‌ನಲ್ಲಿ ಅಂಬೇಡ್ಕರ್‌ಗೆ ಅವಹೇಳನ : ಯುವಕನ ವಿರುದ್ಧ ಪ್ರಕರಣ ದಾಖಲು
ಕುಶಾಲನಗರ, ಡಿ.19: ಇತ್ತೀಚಿನ ದಿನಗಳಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಅನಾವಶ್ಯಕವಾದ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ, ತೊಂದರೆಗಳಿಗೆ ಸಿಲುಕುತ್ತಿರುವುದು ಸಹಜವಾಗಿದೆ. ಇದಕ್ಕೆ ಪೂರಕವೆಂಬಂತೆ ವಾಟ್ಸ್‌ಆ್ಯಪ್‌ನಲ್ಲಿ ಅಂಬೇಡ್ಕರ್‌ಗೆ ಅವಹೇಳನ ಮಾಡಿರುವ ಕುರಿತು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಯುವಕನೋರ್ವನ ಮೇಲೆ ದೂರು ದಾಖಲಾಗಿದೆ.
ಏಕಾಂಗಿ ಹುಡುಗರು ಎಂಬ ವಾಟ್ಸ್‌ಆ್ಯಪ್ ಗ್ರೂಪ್ ಒಂದರಲ್ಲಿ ಯುವಕನೋರ್ವ ಡಾ. ಬಿಆರ್. ಅಂಬೇಡ್ಕರ್‌ರವರ ಬಗ್ಗೆ ಅವಹೇಳನಕಾರಿ ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ಚಾಟಿಂಗ್ ಮಾಡಿರುವುದಾಗಿ ಪುನೀತ್ ಎಂಬವರು ನೀಡಿದ ದೂರಿನಲ್ಲಿ ತಿಳಿದುಬಂದಿದೆ.
ಆರೋಪಿಯಾದ ಶ್ರೀನಾಥ್ ಗೌಡ ಎಂಬಾತನನ್ನು ಕೂಡಲೇ ಬಂಧಿಸಿ ಎಸ್ಸಿ, ಎಸ್ಟಿ ಕಾಯ್ದೆ ಹಾಗೂ ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕ ಮತ್ತು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ಮಂಗಳವಾರ ಠಾಣೆಯ ಮುಂಭಾಗ ಜಮಾಯಿಸಿ ಪಟ್ಟುಹಿಡಿದ ಪ್ರಸಂಗ ಜರಗಿತು.
ಈ ಸಂದರ್ಭ ದಸಂಸ(ಭೀಮವಾದ) ಜಿಲ್ಲಾಧ್ಯಕ್ಷ ಕೆ.ಬಿ.ರಾಜು ಪೃಥ್ವಿರಾಜ್, ಎಸ್‌ಡಿಪಿಐ ಕುಶಾಲನಗರ ಘಟಕದ ಸದಸ್ಯ ಆಬೀದ್‌ಇಬ್ರಾಹಿಂ, ಶ್ರೀನಿವಾಸ್, ಕೀರ್ತಿರಾಜು, ದೀಪಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







