ಕುಂತೂರು ಪದವು: ರಸ್ತೆ ಅಪಘಾತ; ಬೈಕ್ ಸವಾರರಿಗೆ ಗಾಯ
ಕಡಬ, ಡಿ.19. ಉಪ್ಪಿನಂಗಡಿ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಪದವು ಎಂಬಲ್ಲಿ ಬೈಕ್ ಮಧ್ಯೆ ಅಪಘಾತ ಉಂಟಾಗಿ ಎರಡೂ ಬೈಕಿನ ಸವಾರರೂ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ಗಾಯಗೊಂಡವರನ್ನು ಪುತ್ತೂರು ಒಕ್ಕಲಿಗ ಗೌಡ ಸಹಕಾರಿ ಸಂಘದ ಕಡಬ ಶಾಖೆಯ ಪಿಗ್ಮಿ ಸಂಗ್ರಾಹಕ ಪುತ್ತೂರು ತಾಲೂಕಿನ ಕೊಂಬಾರು ಗ್ರಾಮದ ಆರ್ದೇಲ್ ನಿವಾಸಿ ಬೆಳಿಯಪ್ಪ ಗೌಡ(32) ಎಂದು ಗುರುತಿಸಲಾಗಿದೆ.
ಇನ್ನೊಂದು ಬೈಕಿನ ಸವಾರ ಪೆರಾಬೆ ನಿವಾಸಿ ಭುವನ್ (22) ಎಂದು ಗುರುತಿಸಲಾಗಿದೆ. ಬೆಳಿಯಪ್ಪ ಗೌಡ ಅವರು ಆಲಂಕಾರಿನಲ್ಲಿ ಪಿಗ್ಮಿ ಸಂಗ್ರಹಿಸಿ ಕಡಬಕ್ಕೆ ವಾಪಾಸಾಗುತ್ತಿದ್ದಾಗ ಕುಂತೂರು ಪದವಿನಲ್ಲಿ ಅಂಗಡಿಯೊಂದಕ್ಕೆ ಹೋಗಲು ಬೈಕ್ ತಿರುಗಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಭುವನ್ ಅವರ ಬೈಕ್ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಪರಿಣಾಮ ಬೆಳಿಯಪ್ಪ ಗೌಡ ಕಾಲು ಮೂಲೆ ಮುರಿತಕ್ಕೊಳಗಾಗಿದೆ. ಭುವನ್ ಕೂಡಾ ಗಾಯಗೊಂಡಿದ್ದು, ಇಬ್ಬರೂ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.





