ಡಿ.19: ಕಟಕ್‌ನಲ್ಲಿ ಭಾರತ -ಲಂಕಾ ಮೊದಲ ಟ್ವೆಂಟಿ-20
ಟೆಸ್ಟ್, ಏಕದಿನ ಸರಣಿ ಕಳೆದುಕೊಂಡ ಸಿಂಹಳೀಯರಿಗೆ ಸರಣಿ ಗೆಲ್ಲಲು ಇನ್ನೊಂದು ಅವಕಾಶ

ಕಟಕ್, ಡಿ.19: ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಕಟಕ್‌ನಲ್ಲಿ ಬುಧವಾರ ನಡೆಯಲಿದೆ.
ಭಾರತ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಲಂಕೆಗೆ ಸೋಲುಣಿಸುವ ಮೂಲಕ ತನ್ನ ಪ್ರಾಬಲ್ಯವನ್ನು ಮುಂದುವರಿಸಲು ನೋಡುತ್ತಿದೆ. ಭಾರತಕ್ಕೆ 2017ರಲ್ಲಿ ಇದು ಕೊನೆಯ ಸರಣಿಯಾಗಿದೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೆಸ್ಟ್‌ನಲ್ಲಿ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡ ಟೀಮ್ ಇಂಡಿಯಾ ಏಕದಿನ ಸರಣಿಯಲ್ಲಿ ಹಂಗಾಮಿ ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮತ್ತೆ 2-1 ಅಂತರದಲ್ಲಿ ಸರಣಿ ಜಯಿಸಿತು. ಇದೀಗ ಟ್ವೆಂಟಿ-20 ಸರಣಿಯಲ್ಲಿ ಸವಾಲು ಎದುರಾಗಿದೆ.
ಶ್ರೀಲಂಕಾ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಮೊಹಾಲಿಯಲ್ಲಿ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾರ ಭರ್ಜರಿ ಬ್ಯಾಟಿಂಗ್ ಮುಂದೆ ಲಂಕಾದ ಆಟ ನಡೆಯಲಿಲ್ಲ. ಆದರೆ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ತಂಡದ ಗೆಲುವಿಗೆ ಉತ್ತಮ ಅವಕಾಶ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. 1 ವಿಕೆಟ್ ನಷ್ಟದಲ್ಲಿ 136 ರನ್ ಗಳಿಸಿದ್ದ ಶ್ರೀಲಂಕಾ ತಂಡ ಬಳಿಕ 215 ರನ್‌ಗಳಿಗೆ ಆಲೌಟಾಗಿತ್ತು.
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಅವರ ಮಿಂಚಿನ ಸ್ಟಂಪಿಂಗ್, ಸ್ಪಿನ್ನರ್‌ಗಳಾದ ಕುಲ್‌ದೀಪ್ ಯಾದವ್ ಮತ್ತು ಯಜುವೇಂದ್ರ ಚಹಾಲ್ ಅವರ ಶಿಸ್ತುಬದ್ಧ ಸ್ಪಿನ್ ದಾಳಿ ಲಂಕೆಯ ಬ್ಯಾಟಿಂಗ್‌ನ್ನು ಬೇಗನೆ ನಿಯಂತ್ರಿಸಿತ್ತು.
ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಮೇಲುಗೈ ಸಾಧಿಸಿದ್ದ ಟೀಮ್ ಇಂಡಿಯಾಕ್ಕೆ ಟ್ವೆಂಟಿ -20 ಸರಣಿಯಲ್ಲಿ ಸರಣಿ ಗೆಲ್ಲುವುದು ಯೋಚಿಸಿದಷ್ಟು ಸುಲಭವಲ್ಲ. ಮೊದಲ ಏಕದಿನ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತ್ತು. ಈ ಕಾರಣದಿಂದಾಗಿ ಮೊದಲ ಟ್ವೆಂಟಿ-20 ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.
ಲಂಕಾದ ವಿರುದ್ಧ ಭಾರತ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 7-4 ಗೆಲುವಿನ ದಾಖಲೆ ಹೊಂದಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಗೆಲುವಿನ ದಾಖಲೆ ಹೊಂದಿದೆ. ಕಟಕ್‌ನ ಬರಾಬತಿ ಸ್ಟೇಡಿಯಂನಲ್ಲಿ ಟ್ವೆಂಟಿ-20 ಪಂದ್ಯದಲ್ಲಿ ಭಾರತ ತಂಡದ ಪ್ರದರ್ಶನ ತೃಪ್ತಿಕರವಾಗಿಲ್ಲ. 2015ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಟ್ವೆಂಟಿ-20 ಪಂದ್ಯದಲ್ಲಿ ಭಾರತ 92 ರನ್‌ಗಳಿಗೆ ಆಲೌಟಾಗಿತ್ತು. ಈ ಕಾರಣದಿಂದಾಗಿ ಭಾರತ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ತನ್ನ ದೌರ್ಬಲ್ಯವನ್ನು ಸರಿಪಡಿಸುವ ಕಡೆಗೆ ಎಚ್ಚರವಹಿಸಬೇಕಾಗಿದೆ.
ಭಾರತ ಬ್ಯಾಟಿಂಗ್ ರೋಹಿತ್ ಅವರನ್ನು ಅವಲಂಬಿಸಿದೆ. ಶರ್ಮಾ ಮತ್ತು ಲೋಕೇಶ್ ರಾಹುಲ್ ಮೊದಲ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸುವುದನ್ನು ನಿರೀಕ್ಷಿಸಲಾಗಿದೆ. ಸೌರಾಷ್ಟ್ರದ ಎಡಗೈ ವೇಗಿ ಜಯದೇವ್ ಉನದ್ಕಟ್ ಕಳೆದ ಜೂನ್‌ನಲ್ಲಿ ಝಿಂಬಾಬ್ವೆ ವಿರುದ್ಧ ಕೊನೆಯ ಬಾರಿ ಟ್ವೆಂಟಿ-20 ಪಂದ್ಯವನ್ನಾಡಿದ್ದರು. ಅವರು ತಂಡಕ್ಕೆ ವಾಪಸಾಗಿದ್ದಾರೆ. ಯುವ ಬೌಲರ್‌ಗಳಾದ ವಾಶಿಂಗ್ಟನ್ ಸುಂದರ್, ಬಾಸಿಲ್ ಥಾಂಪಿ ಮತ್ತು ದೀಪಕ್ ಹೂಡಾ ಅಂತಿಮ ಹನ್ನೊಂದರಲ್ಲಿ ಅವಕಾಶ ಪಡೆಯುವುದನ್ನು ನಿರೀಕ್ಷಿಸಲಾಗಿದೆ. ಬರೋಡಾದ ಆಲ್‌ರೌಂಡರ್ ಹೂಡಾ ಕಳೆದ ಫೆಬ್ರವರಿಯಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಶತಕ(108) ದಾಖಲಿಸಿದ್ದರು. ಇದು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ದಾಖಲಾಗಿದ್ದ ನಾಲ್ಕನೇ ವೇಗದ ಶತಕವಾಗಿತ್ತು.
ಟೀಮ್ ಇಂಡಿಯಾದಲ್ಲಿ ಈಗಾಗಲೇ ಇಬ್ಬರು ಮ್ಯಾಚ್ ಫಿನಿಶರ್ಸ್‌ಗಳಿದ್ದಾರೆ.ಅವರೆಂದರೆ ಧೋನಿ ಮತ್ತು ಹಾರ್ದಿಕ್ ಪಾಂಡ್ಯ. ತಂಡಕ್ಕೆ ಇನ್ನೊಬ್ಬ ಮ್ಯಾಚ್ ಫಿನಿಶರ್‌ನ ಪ್ರವೇಶವಾಗಲಿದೆ. ಅವರು ಹೂಡಾ.
ಅನುಭವಿ ವೇಗಿ ಭುವನೇಶ್ವರ ಕುಮಾರ್‌ಗೆ ವಿಶ್ರಾಂತಿ ನೀಡಿರುವ ಹಿನ್ನೆಲೆಯಲ್ಲಿ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ಜವಾಬ್ದಾರಿ ಜಸ್‌ಪ್ರೀತ್ ಬುಮ್ರಾ ಹೆಗಲ ಮೇಲೆ ಬಿದ್ದಿದೆ. ಕುಲ್‌ದೀಪ್ ಯಾದವ್ ಮತ್ತು ಚಹಾಲ್ ತಂಡದಲ್ಲಿದ್ದಾರೆ.
ಶ್ರೀಲಂಕಾ ತಂಡ ಕಳೆದ ಎಪ್ರಿಲ್‌ನಲ್ಲಿ ಬಾಂಗ್ಲಾ ವಿರುದ್ಧ ಟ್ವೆಂಟಿ-20 ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ ಸತತ 5 ಟ್ವೆಂಟಿ-20 ಪಂದ್ಯಗಳನ್ನು ಕಳೆದುಕೊಂಡಿದೆ.
ಉಪುಲ್ ತರಂಗಾ ಮೂರನೇ ಏಕದಿನ ಪಂದ್ಯದಲ್ಲಿ ಆಕರ್ಷಕ 95 ರನ್ ಸಿಡಿಸಿದ್ದರು. ಅವರು ಅದೇ ಪ್ರದರ್ಶನವನ್ನು ಮುಂದುವರಿಸುವುದನ್ನು ನಿರೀಕ್ಷಿಸಲಾಗಿದೆ.
ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಅವರು ತಂಡದ ಬೆನ್ನೆಲುಬು ಎನಿಸಿಕೊಂಡಿದ್ದಾರೆ. ಧರ್ಮಶಾಲಾದಲ್ಲಿ ಟೀಮ್ ಇಂಡಿಯಾವನ್ನು 112 ರನ್‌ಗಳಿಗೆ ನಿಯಂತ್ರಿಸಿದ್ದ ಶ್ರೀಲಂಕಾದ ನೀಡಲಿರುವ ಪ್ರದರ್ಶನದ ಬಗ್ಗೆ ಕುತೂಹಲ ಕೆರಳಿಸಿದೆ.
ಭಾರತ :ರೋಹಿತ್ ಶರ್ಮಾ(ನಾಯಕ), ಲೋಕೇಶ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ವಾಶಿಂಗ್ಟನ್ ಸುಂದರ್, ಯಜುವೆಂದ್ರ ಚಹಾಲ್, ಕುಲ್‌ದೀಪ್ ಯಾದವ್, ದೀಪಕ್ ಹೂಡಾ, ಜಸ್‌ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್, ಬಾಸಿಲ್ ಥಾಂಪಿ ಮತ್ತು ಜಯದೇವ್ ಉನದ್ಕಟ್.
ಶ್ರೀಲಂಕಾ: ತಿಸ್ಸರಾ ಪೆರೇರಾ(ನಾಯಕ), ಉಪುಲ್ ತರಂಗ, ಆ್ಯಂಜೆಲೊ ಮ್ಯಾಥ್ಯೂಸ್, ಕುಶಾಲ್ ಜನಿತಾ ಪೆರೇರಾ, ಧನುಷ್ಕ ಗುಣತಿಲಕ, ನಿರೋಶನ್ ಡಿಕ್ವೆಲ್ಲಾ, ಅಸೆಲಾ ಗುಣರತ್ನೆ, ಸದೀರ ಸಮರವಿಕ್ರಮ, ದಾಸನ್ ಶನಕ, ಚತುರಂಗ ಡಿ ಸಿಲ್ವ, ಸಚಿತ ಪಥಿರಣ, ಧನಂಜಯ ಡಿ ಸಿಲ್ವ, ನುವಾನ್ ಪ್ರದೀಪ್, ವಿಶ್ವ ಫೆರ್ನಾಂಡೊ ಮತ್ತು ದುಶ್ಮಂಥ ಚಮೀರಾ.







