ಮೊದಲ ಇನಿಂಗ್ಸ್ ನಲ್ಲಿ 400 ರನ್ ದಾಖಲಿಸಿದರೂ ಇನಿಂಗ್ಸ್ ಸೋಲು ತಪ್ಪಲಿಲ್ಲ..!

ಪರ್ತ್, ಡಿ.19: ಆ್ಯಶಸ್ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 403 ರನ್ ಗಳಿಸಿತ್ತು. ಹೀಗಿದ್ದರೂ ಆಸ್ಟ್ರೇಲಿಯ ವಿರುದ್ಧ ಇನಿಂಗ್ಸ್ ಸೋಲು ತಪ್ಪಲಿಲ್ಲ. ಇನಿಂಗ್ಸ್ ಹಾಗೂ 41 ರನ್‌ಗಳ ಸೋಲು ಅನುಭವಿಸಿರುವ ಇಂಗ್ಲೆಂಡ್ ಸರಣಿ ಸೋಲು ಅನುಭವಿಸಿದೆ.
ತಂಡವೊಂದು ಮೊದಲು ಬ್ಯಾಟ್ ಮಾಡಿ ಇನಿಂಗ್ಸ್‌ನಲ್ಲಿ 400ಕ್ಕೂ ಅಧಿಕ ರನ್‌ಗಳಿಸಿದ ಬಳಿಕ ಇನಿಂಗ್ಸ್ ಸೋಲು ಅನುಭವಿಸಿದ ಘಟನೆ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಐದು ಬಾರಿ ನಡೆದಿದೆ.
►1930: ಇಂಗ್ಲೆಂಡ್-ಆಸ್ಟ್ರೇಲಿಯ, ಓವಲ್
ಆ್ಯಶಸ್ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 405 ರನ್ ದಾಖಲಿಸಿತ್ತು. ಡಾನ್ ಬ್ರಾಡ್ಮನ್ ಅವರ ದ್ವಿಶತಕದ ನೆರವಿನಲ್ಲಿ ಆಸ್ಟ್ರೇಲಿಯ 695 ರನ್ ಗಳಿಸುವ ಮೂಲಕ ಇನಿಂಗ್ಸ್ ಮುನ್ನಡೆ ಸಾಧಿಸಿತ್ತು, ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ್ನು 251 ರನ್‌ಗಳಿಗೆ ನಿಯಂತ್ರಿಸಿದ ಆಸ್ಟ್ರೇಲಿಯ ಇನಿಂಗ್ಸ್ ಹಾಗೂ 39 ರನ್‌ಗಳ ಜಯ ಗಳಿಸಿತ್ತು.
►2011:ಶ್ರೀಲಂಕಾ -ಇಂಗ್ಲೆಂಡ್, ಕಾರ್ಡಿಫ್
ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ 3 ಟೆಸ್ಟ್‌ಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಸೋಲು ಅನುಭವಿಸಿತ್ತು. ಶ್ರೀಲಂಕಾ ಮೊದಲು ಬ್ಯಾಟ್ ಮಾಡಿ 400 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ 5 ವಿಕೆಟ್ ನಷ್ಟದಲ್ಲಿ 496 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಎರಡನೇ ಇನಿಂಗ್ಸ್‌ನಲ್ಲಿ ಶ್ರೀಲಂಕಾ 82 ರನ್‌ಗಳಿಗೆ ಆಲೌಟ್ ಆಗಿ ಇನಿಂಗ್ಸ್ ಹಾಗೂ 14 ರನ್‌ಗಳ ಅಂತರದಿಂದ ಇಂಗ್ಲೆಂಡ್‌ಗೆ ಶರಣಾಯಿತು.
►2016: ಇಂಗ್ಲೆಂಡ್-ಭಾರತ , ಮುಂಬೈ
ಐದು ಟೆಸ್ಟ್‌ಗಳ ಸರಣಿಯಲ್ಲಿ ಇಂಗ್ಲೆಂಡ್ ತಂಡ 0-2 ಹಿನ್ನಡೆ ಅನುಭವಿಸಿ ಮುಂಬೈಗೆ ಆಗಮಿಸಿತ್ತು. ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ 4ನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಚೊಚ್ಚಲ ಪ್ರವೇಶಗೈದ 19ರ ಹರೆಯದ ಕೀಟನ್ ಜೆನ್ನಿಂಗ್ಸ್ ಶತಕದ ನೆರವಿನಲ್ಲಿ 400ಕ್ಕೂ ಅಧಿಕ ರನ್ ಸೇರಿಸಿತು. ಭಾರತದ ನಾಯಕ ವಿರಾಟ್ ಕೊಹ್ಲಿ ದ್ವಿಶತಕ , ಮುರಳಿ ವಿಜಯ್ ಮತ್ತು ಜಯಂತ್ ಯಾದವ್ ಶತಕಗಳ ನೆರವಿನಲ್ಲಿ ಭಾರತ 631 ರನ್ ಗಳಿಸಿತು. ಆದರೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 195 ರನ್‌ಗಳಿಗೆ ಆಲೌಟಾಗಿ ಇನಿಂಗ್ಸ್ ಮತ್ತು 36 ರನ್‌ಗಳ ಸೋಲು ಅನುಭವಿಸಿ, ಸರಣಿಯನ್ನು ಕಳೆದುಕೊಂಡಿತು.
►2016: ಇಂಗ್ಲೆಂಡ್-ಭಾರತ, ಚೆನ್ನೈ
ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಮೊಯಿನ್ ಅಲಿ ಶತಕ (146) ನೆರವಿನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 477 ರನ್ ಗಳಿಸಿತ್ತು. ಕರುಣ್ ನಾಯರ್ ತ್ರಿಶತಕ ಮತ್ತು ಲೋಕೇಶ್ ರಾಹುಲ್ 199 ರನ್ ನೆರವಿನಲ್ಲಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 759 ರನ್ ಗಳಿಸಿತ್ತು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ದಾಖಲಿಸಿದ ಗರಿಷ್ಠ ಸ್ಕೋರ್ ಆಗಿತ್ತು. ಆದರೆ ರವೀಂದ್ರ ಜಡೇಜ ದಾಳಿಗೆ ಸಿಲುಕಿದ ಇಂಗ್ಲೆಂಡ್ ಇನಿಂಗ್ಸ್ ಹಾಗೂ 75 ರನ್‌ಗಳ ಸೋಲು ಅನುಭವಿಸಿತು.
►2016: ಪಾಕಿಸ್ತಾನ -ಆಸ್ಟ್ರೇಲಿಯ , ಎಂಸಿಜಿ
ಪಾಕಿಸ್ತಾನ ತಂಡದ ನಾಯಕ ಅಝರ್ ಅಲಿ ಶತಕದ ಸಹಾಯದಿಂದ ಮೊದಲ ಇನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟದಲ್ಲಿ 443 ರನ್ ಗಳಿಸಿತ್ತು. ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 624 ರನ್ ಗಳಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಮಿಚೆಲ್ ಸ್ಟಾರ್ಕ್ (36ಕ್ಕೆ4) ದಾಳಿಗೆ ಸಿಲುಕಿದ ಪಾಕಿಸ್ತಾನ 163 ರನ್‌ಗಳಿಗೆ ಆಲೌಟಾಗಿ ಇನಿಂಗ್ಸ್ ಮತ್ತು 18 ರನ್ ಅಂತರದಿಂದ ಸೋಲೊಪ್ಪಿಕೊಂಡಿತು.







