ಪ್ರಧಾನಿ ನಮ್ಮ ಮಾತನ್ನು ಆಲಿಸಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ 'ಓಖಿ' ಸಂತ್ರಸ್ತರು

ತಿರುವನಂತಪುರಂ, ಡಿ.20: ಓಖಿ ಚಂಡಮಾರುತ ಸಂತ್ರಸ್ತರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಹಿಂದಿರುಗುತ್ತಿದ್ದ ವೇಳೆ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ ಎಂದು madhyamam.com ವರದಿ ಮಾಡಿದೆ. ಪ್ರಧಾನಿ ತಮ್ಮ ಮಾತನ್ನು ಆಲಿಸಲು ಪ್ರಯತ್ನಿಸಿಲ್ಲ ಎಂದು ಆರೋಪಿಸಿ ಮೀನುಗಾರರು ಮತ್ತು ಕುಟುಂಬ ಸದಸ್ಯರು ಪ್ರತಿಭಟಿಸಿದರು.
ಪೂಂದುರದ ಸಂತ ಥಾಮಸ್ ಆಡಿಟೊರಿಯಂ ಪ್ರಧಾನಿ ಮೋದಿ ಓಖಿ ಚಂಡಮಾರುತ ಸಂತ್ರಸ್ತರನ್ನು ಭೇಟಿಯಾಗಿದ್ದರು. ಸಂತ್ರಸ್ತ ಕುಟುಂಬಗಳನ್ನು ನಾಲ್ಕು ವಿಭಾಗಗಳಾಗಿ ಹಾಲ್‍ನಲ್ಲಿ ಕುಳ್ಳಿರಿಸಲಾಗಿತ್ತು. ಪೂಂದುರ ವೀಂಞದ ಮೀನುಗಾರ ಕುಟುಂಬಗಳ ದೂರುಗಳನ್ನು ಪ್ರಧಾನಿ ಆಲಿಸಿದ್ದರು. ಆದರೆ ಹಿಂದೆ ಕುಳಿತಿದ್ದ ವಲಿಯತುರ, ಪುಕ್ಕುರಿಚ್ಚಿ, ಪುಲ್ಲುವಿಳ ಎಂಬಲ್ಲಿನ ಸುಮಾರು 200 ಮಂದಿ ಪ್ರಧಾನಿ ತಮ್ಮ ದೂರುಗಳನ್ನು ಆಲಿಸಿಲ್ಲ, ತಮ್ಮನ್ನು ಭೇಟಿಯಾಗಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ.
15 ನಿಮಿಷಗಳ ಕಾಲ ವೇದಿಕೆಯಲ್ಲಿದ್ದ ಪ್ರಧಾನಿ ಕಾರ್ಯಕ್ರಮವನ್ನು ಮುಗಿಸಿ ಸಭಾಂಗಣದಿಂದ ತೆರಳುತ್ತಿದ್ದಾಗ ಮೀನುಗಾರರು ಮತ್ತೊಮ್ಮೆ ಪ್ರತಿಭಟನೆ ನಡೆಸಿದರು. "ಗಂಟೆಗೂ ಮೊದಲು ನಮ್ಮನ್ನು ಕರೆತಂದದ್ದೇಕೆ?, ಏನನ್ನೂ ಕೇಳಲು ಪ್ರಧಾನಿ ತಯಾರಿಲ್ಲ" ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೇರಳ ಸಿಎಂ ಪಿಣರಾಯಿ ವಿಜಯನ್, ಬಿಜೆಪಿ ನಾಯಕರಾದ ಕುಮ್ಮನಂ ರಾಜಶೇಖರನ್, ವಿ. ಮುರಳೀಧರನ್, ಪಿಕೆ ಕೃಷ್ಣದಾಸ್, ಕೇರಳ ಕಾಂಗ್ರೆಸ್ ನಾಯಕ ಪಿಸಿ ಥಾಮಸ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







