ತೈಲ ಮತ್ತು ಅನಿಲ ಉತ್ಪಾದನೆ ನಿಷೇಧಿಸುವ ಕಾನೂನು ಜಾರಿಗೊಳಿಸಿದ ಫ್ರಾನ್ಸ್ !
ಇದು ವಿಶ್ವದಲ್ಲೇ ಮೊದಲು

ಪ್ಯಾರಿಸ್,ಡಿ.20: ತೈಲ ಮತ್ತು ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ ಕಾರ್ಯ ಮತ್ತು ಉತ್ಪಾದನೆಯನ್ನು ದೇಶದಲ್ಲಿ ಹಾಗೂ ವಿದೇಶಗಳಲ್ಲಿ ತಾನು ಹೊಂದಿರುವ ಭೂಮಿಯಲ್ಲಿ 2040ರೊಳಗಾಗಿ ನಿಷೇಧಿಸುವ ಕಾನೂನೊಂದನ್ನು ಫ್ರಾನ್ಸ್ ದೇಶದ ಸಂಸತ್ತು ಅನುಮೋದಿಸಿದೆ.
ಹಾಲಿ ಇರುವ ಡ್ರಿಲ್ಲಿಂಗ್ ಅನುಮತಿಯನ್ನು ನವೀಕರಿಸಲು ಹಾಗೂ ಹೊಸ ಪರವಾನಿಗೆಯನ್ನು ನೀಡಲು ಈ ಕಾನೂನು ಅನುಮತಿಸುವುದಿಲ್ಲ. ಇಂತಹ ಒಂದು ಕಾನೂನುನ್ನು ವಿಶ್ವದಲ್ಲಿಯೇ ಜಾರಿಗೊಳಿಸಿದ ಪ್ರಥಮ ದೇಶ ತಾನೆಂದು ಪ್ರಾನ್ಸ್ ಹೇಳಿಕೊಂಡಿದೆ. ಆದರೆ ಫ್ರಾನ್ಸ್ ಉಪಯೋಗಿಸುತ್ತಿರುವ ಒಟ್ಟು ತೈಲ ಹಾಗೂ ಅನಿಲದ ಶೇ 1ರಷ್ಟನ್ನು ಮಾತ್ರ ದೇಶದಲ್ಲಿ ಉತ್ಪಾದಿಸಲಾಗುತ್ತಿರುವುದರಿಂದ ಈ ಒಂದು ಕ್ರಮ ಕೇವಲ ಸಾಂಕೇತಿಕ ಎಂದೇ ಬಣ್ಣಿಸಲಾಗಿದೆ ಹಾಗೂ ಹೆಚ್ಚಿನ ಪರಿಣಾಮ ಬೀರದು ಎಂದು ಹೇಳಲಾಗುತ್ತಿದೆ.
ದೇಶವನ್ನು ಪಳೆಯುಳಿಕೆ ಇಂಧನದಿಂದ ಮುಕ್ತಗೊಳಿಸಿ ಗ್ಲೋಬಲ್ ವಾರ್ಮಿಂಗ್ ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ಯಾರಿಸ್ ಹವಾಮಾನ ಒಪ್ಪಂದದಂತೆ ಮುಂದುವರಿಯಲು ಫ್ರಾನ್ಸ್ ದೇಶಕ್ಕಿರುವ ಬದ್ಧತೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.





