ನಿಮ್ಮ ಸಂಪೂರ್ಣ ಆರೋಗ್ಯಕ್ಕಾಗಿ ಈ ಜ್ಯೂಸ್ ಕುಡಿಯಿರಿ
ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಈ 'ಎಬಿಸಿ ಪೇಯ'
ಹೊಳೆಯುವ ಚರ್ಮ, ಅನಗತ್ಯ ಬೊಜ್ಜು ನಿವಾರಣೆ, ಕಡಿಮೆ ವಯಸ್ಸಿನವರಂತೆ ಕಾಣಬೇಕು ಮತ್ತು ವಿವಿಧ ಕಾಯಿಲೆಗಳಿಂದ ರಕ್ಷಣೆ ಪಡೆಯಬೇಕು ಎಂದು ಬಯಸದವರು ಯಾರಾದರೂ ಇದ್ದಾರಾ? ಎಲ್ಲರೂ ಈ ಆರೋಗ್ಯ ಲಾಭಗಳನ್ನು ಬಯಸುತ್ತಾರೆ. ಇಂದಿನ ಗಡಿಬಿಡಿಯ ಜೀವನದಲ್ಲಿ ಪ್ರತಿಯೊಬ್ಬರೂ ಉತ್ತಮ ಆರೋಗ್ಯಕ್ಕಾಗಿ ಹೆಚ್ಚು ನೈಸರ್ಗಿಕವಾದ ಮತ್ತು ತ್ವರಿತ ಫಲ ನೀಡುವ ಮಾರ್ಗಕ್ಕಾಗಿ ಹಂಬಲಿಸುತ್ತಿರುತ್ತಾರೆ. ಅಂತಹವರಿಗಾಗಿಯೇ ಇಲ್ಲೊಂದು ಅದ್ಭುತ ಪೇಯವಿದೆ. ಹೆಚ್ಚಿನವರಿಗೆ ಇದರ ಬಗ್ಗೆ ತಿಳಿದಿಲ್ಲ.
ಹಲವಾರು ಆರೋಗ್ಯವರ್ಧಕ ಪೇಯಗಳ ಬಗ್ಗೆ ನೀವು ಖಂಂಡಿತವಾಗಿಯೂ ಕೇಳಿರಬೇಕು. ಆದರೆ ನಾವೀಗ ಹೇಳುತ್ತಿರುವ ಪೇಯವು ಖಂಡಿತವಾಗಿಯೂ ನಿಮ್ಮ ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಹಲವಾರು ವರ್ಷಗಳ ಹಿಂದೆ ಚೀನಾದ ಗಿಡಮೂಲಿಕೆ ವೈದ್ಯನೋರ್ವ ಶ್ವಾಸಕೋಶದ ಕ್ಯಾನ್ಸರ್ ಮತ್ತು ಇತರ ಹಲವಾರು ರೋಗಗಳ ಚಿಕಿತ್ಸೆಗಾಗಿ ಈ ಅದ್ಭುತ ಪೇಯವನ್ನು ಆವಿಷ್ಕರಿಸಿದ್ದ. ಈಗೀಗ ಈ ಪೇಯವು ತನ್ನ ಅದ್ಭುತ ಆರೋಗ್ಯ ಲಾಭಗಳಿಂದಾಗಿ ವಿಶ್ವಾದ್ಯಂತ ಭಾರೀ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ.
ಎಬಿಸಿ ಪೇಯವೆಂದೇ ಕರೆಯಲಾಗುವ ಇದನ್ನು ಆ್ಯಪಲ್(ಸೇಬು), ಬೀಟ್‌ರೂಟ್ ಮತ್ತ ಕ್ಯಾರೆಟ್(ಗಜ್ಜರಿ) ಅನ್ನು ಬಳಸಿ ತಯಾರಿಸಲಾಗುತ್ತದೆ.
ರಸಭರಿತವಾದ ಒಂದು ದೊಡ್ಡ ಸೇಬು, ಎರಡು ಮಧ್ಯಮ ಗಾತ್ರದ ಬೀಟ್‌ರೂಟ್ ಮತ್ತು ಒಂದು ಸಣ್ಣ ಕ್ಯಾರೆಟ್‌ನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಬೀಟ್‌ರೂಟ್‌ನ ಸಿಪ್ಪೆಯನ್ನು ತೆಗೆದ ಬಳಿಕ ಅದನ್ನು, ಸೇಬು ಮತ್ತು ಕ್ಯಾರೆಟ್‌ನ್ನು ಸಣ್ಣ ತುಂಡುಗಳಾಗಿ ಹೆಚ್ಚಿಕೊಳ್ಳಿ. ಇವುಗಳನ್ನು ಬ್ಲೆಂಡರ್ ಅಥವಾ ಜ್ಯೂಸರ್‌ನಲ್ಲಿ ಹಾಕಿ ರಸವನ್ನು ತಯಾರಿಸಿ, ಅಗತ್ಯವಾದರೆ ಸ್ವಲ್ಪ ನೀರು ಬೆರೆಸಿಕೊಳ್ಳಿ. ರುಚಿಗಾಗಿ ಬೇಕಿದ್ದರೆ ಲಿಂಬೆಹಣ್ಣಿನ ರಸವನ್ನು ಬೆರೆಸಿಕೊಂಡು ಸೇವಿಸಿ. ಯಾವುದೇ ಕಾರಣಕ್ಕೂ ಸಕ್ಕರೆಯನ್ನು ಸೇರಿಸಬೇಡಿ.
ಈ ಅದ್ಭುತ ಪೇಯದ ಕೆಲವು ಪ್ರಮುಖ ಆರೋಗ್ಯ ಲಾಭಗಳು ಇಲ್ಲಿವೆ.
ಬೊಜ್ಜು ಕರಗುತ್ತದೆ
ನಿಮ್ಮ ಶರೀರದ ತೂಕವನ್ನು ಇಳಿಸಿಕೊಳ್ಳಲು ಬಯಸಿದ್ದರೆ ಇದು ನಿಮಗಾಗಿ ಹೇಳಿ ಮಾಡಿಸಿದ ಪೇಯವಾಗಿದೆ. ಈ ಜ್ಯೂಸ್‌ನಲ್ಲಿ ಕ್ಯಾಲೊರಿಗಳು ತುಂಬ ಕಡಿಮೆಯಾಗಿದ್ದು ಅಧಿಕ ನಾರಿನಂಶವಿರುವುದರಿಂದ ಪ್ರತಿದಿನ ಸೇವಿಸುವುದರಿಂದ ತುಂಬ ಹೊತ್ತು ಹಸಿವಿನ ಅನುಭವವಾಗುವುದಿಲ್ಲ, ಹೀಗಾಗಿ ಮಧ್ಯೆ ಮಧ್ಯೆ ಏನಾದರೂ ತಿನ್ನಬೇಕೆಂಬ ಬಯಕೆ ಕಾಡುವುದಿಲ್ಲ. ಕಷ್ಟಕರ ವ್ಯಾಯಾಮದ ಬಳಿಕ ಈ ಪೇಯವನ್ನು ಸೇವಿಸಿದರೆ ಚೇತರಿಕೆ ನೀಡುತ್ತದೆ.
ನಿಮ್ಮನ್ನು ಎಳೆಯರನ್ನಾಗಿಸುತ್ತದೆ
ತಮ್ಮ ವಯಸ್ಸಿಗಿಂತ ಸಣ್ಣವರಾಗಿ ಕಾಣಿಸಬೇಕೆಂದು ಯಾರು ಬಯಸುವುದಿಲ್ಲ? ಈ ಪೇಯದಲ್ಲಿರುವ ಎ, ಬಿ-ಕಾಂಪ್ಲೆಕ್ಸ್, ಸಿ, ಇ ಮತ್ತು ಕೆ ವಿಟಾಮಿನ್‌ಗಳು ನಿಮ್ಮ ತ್ವಚೆಯ ಪಾಲಿಗೆ ಅದ್ಭುತ ಕಾರ್ಯಗಳನ್ನು ಮಾಡುತ್ತವೆ. ವಯಸ್ಸಾಗಿರುವುದರ ಕುರುಹುಗಳನ್ನು, ಚರ್ಮದ ಮೇಲಿನ ಕಲೆಗಳನ್ನು ಮತ್ತು ಮೊಡವೆಗಳನ್ನು ಅವು ನಿವಾರಿಸುತ್ತವೆ. ನಿಮ್ಮ ಶರೀರ ಮತ್ತು ಪ್ರಮುಖ ಅಂಗಾಂಗಗಳಿಗೆ ಪುನಃಶ್ಚೇತನವನ್ನು ನೀಡುವ ಮೂಲಕ ಎಬಿಸಿ ಜ್ಯೂಸ್ ನಿಮ್ಮನ್ನು ನಿಮ್ಮ ವಯಸ್ಸಿಗಿಂತ ಎಳೆಯರನ್ನಾಗಿಸುತ್ತದೆ.
ಹೃದಯಕ್ಕೂ ಒಳ್ಳೆಯದು
ಈ ಪೇಯದಲ್ಲಿರುವ ಸೇಬು, ಬೀಟ್‌ರೂಟ್ ಮತ್ತು ಕ್ಯಾರೆಟ್ ನಿಮ್ಮ ರಕ್ತದೊತ್ತಡ ವನ್ನು ನಿಯಂತ್ರಣದಲ್ಲಿರಿಸುತ್ತವೆ ಮತ್ತು ನಿಮ್ಮ ಹೃದಯಕ್ಕೆ ವಿವಿಧ ಕಾಯಿಲೆಗಳ ವಿರುದ್ಧ ರಕ್ಷಣೆಯನ್ನು ನೀಡುತ್ತವೆ. ಈ ಪೇಯದಲ್ಲಿ ಕ್ಯಾರೊಟಿನ್ ಹೇರಳವಾಗಿರುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನೂ ನಿಯಂತ್ರಿಸುತ್ತದೆ.
ಸಾಮಾನ್ಯ ಕಾಯಿಲೆಗಳಿಂದ ಪಾರು ಮಾಡುತ್ತದೆ ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಈ ಪೇಯವು ವರದಾನವಾಗಿದೆ. ನಿಯಮಿತವಾಗಿ ಈ ಪೇಯವನ್ನು ಸೇವಿಸುತ್ತಿದ್ದರೆ ಶೀತ ಮತ್ತು ಫ್ಲೂ, ಅಸ್ತಮಾ ಮತ್ತು ರಕ್ತಹೀನತೆಯಂತಹ ಸಾಮಾನ್ಯ ಕಾಯಿಲೆಗಳನ್ನು ತಕ್ಕಮಟ್ಟಿಗೆ ದೂರವಿರಿಸಬಹುದು.
ಕ್ಯಾನ್ಸರ್ ವಿರುದ್ಧ ಕಾರ್ಯ ನಿರ್ವಹಿಸುತ್ತದೆ
ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ಹಿಂದೆ ಹೇಳಿದಂತೆ ಈ ಪೇಯವನ್ನು ಆವಿಷ್ಕರಿಸಿದ್ದ ಚೀನಿ ವೈದ್ಯ ಶ್ವಾಸಕೋಶದ ಕ್ಯಾನ್ಸರ್‌ನಿಂದ ನರಳುತ್ತಿದ್ದ ರೋಗಿಗೆ ಇದನ್ನು ಸೇವಿಸುವಂತೆ ಶಿಫಾರಸು ಮಾಡಿದ್ದ ಮತ್ತು ಕೇವಲ ಮೂರು ತಿಂಗಳುಗಳಲ್ಲಿ ಆತ ಆಶ್ಚರ್ಯಕರವಾಗಿ ಚೇತರಿಸಿಕೊಂಡಿದ್ದ ಎನ್ನಲಾಗಿದೆ. ಈ ಪೇಯವನ್ನು ಕುಡಿದರೆ ಕ್ಯಾನ್ಸರ್ ಗುಣವಾಗುತ್ತದೆ ಎನ್ನುವುದಕ್ಕೆ ಖಚಿತ ಪುರಾವೆಗಳಿಲ್ಲವಾದರೂ ಅದು ಕ್ಯಾನ್ಸರ್ ಕೋಶಗಳ ಹರಡುವಿಕೆಯನ್ನು ನಿಧಾನಗೊಳಿಸುತ್ತದೆ ಎನ್ನುವುದು ಶ್ರುತಪಟ್ಟಿದೆ. ಆದರೆ ಈ ಪೇಯದ ಪರಿಣಾಮವು ಕ್ಯಾನ್ಸರ್ ರೋಗವು ಯಾವ ಹಂಂತದಲ್ಲಿದೆ ಎನ್ನುವುದನ್ನು ಅವಲಂಬಿ ಸಿರುತ್ತದೆ.
ಕಣ್ಣುಗಳಿಗೂ ಒಳ್ಳೆಯದು
ದಿನದ ಹೆಚ್ಚಿನ ಸಮಯ ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಮೊಬೈಲ್‌ನೊಂದಿಗೇ ಕಳೆಯುತ್ತೀದ್ದೀರಾ? ಒಂದು ಗ್ಲಾಸ್ ಈ ಪೇಯವನ್ನು ಕುಡಿಯುವುದರಿಂದ ಶರೀರಕ್ಕೆ ಸಾಕಷ್ಟು ಎ ವಿಟಾಮಿನ್ ದೊರೆಯುತ್ತದೆ, ಇದು ಕಣ್ಣಿನ ಸ್ನಾಯುಗಳನ್ನು ಬಲಗೊಳಿಸಿ ದೃಷ್ಟಿಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ದಣಿದ ಕಣ್ಣುಗಳಿಗೆ ನಿರಾಳತೆ ನೀಡುತ್ತದೆ.
ನಂಜನ್ನು ನಿವಾರಿಸುತ್ತದೆ
ಎಬಿಸಿ ಪೇಯವು ಶರೀರದಲ್ಲಿಯ ನಂಜಿನಂಶಗಳನ್ನು ನಿವಾರಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಇದರಿಂದ ಕೆಂಪು ರಕ್ತಕಣಗಳ ಉತ್ಪಾದನೆಯೂ ಹೆಚ್ಚಿ ಹಿಮೊಗ್ಲೋಬಿನ್ ವರ್ಧಿಸುತ್ತದೆ ಮತ್ತು ದಣಿವನ್ನು ತಗ್ಗಿಸುತ್ತದೆ.
ಇಷ್ಟೇ ಅಲ್ಲ,ಎಬಿಸಿ ಪೇಯವು ಮಿದುಳನ್ನು ಚುರುಕುಗೊಳಿಸಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ, ಮಹಿಳೆಯರಲ್ಲಿ ಮಾಸಿಕ ಮುಟ್ಟಿನ ನೋವನ್ನು ತಗ್ಗಿಸುತ್ತದೆ, ಮುಖದ ಚರ್ಮಕ್ಕೆ ಹೆಚ್ಚಿನ ಕಾಂತಿಯನ್ನು ನೀಡುತ್ತದೆ ಮತ್ತು ದೊಡ್ಡಕರುಳಿನ ಚಲನವಲನವನ್ನು ಉತ್ತಮಗೊಳಿಸಿ ಪಚನ ಕ್ರಿಯೆಗೆ ನೆರವಾಗುತ್ತದೆ.