ಮಂಗಳೂರು: 2018ನೆ ಸಾಲಿನ ‘ಸಂದೇಶ ಪ್ರಶಸ್ತಿ’ ಪ್ರಕಟ
ಮಂಗಳೂರು, ಡಿ.20: ಪ್ರತಿಷ್ಠಿತ ಸಂದೇಶ ಪ್ರತಿಷ್ಠಾನದ ವತಿಯಿಂದ ನೀಡಲಾಗುವ 2018ನೆ ಸಾಲಿನ ‘ಸಂದೇಶ ಪ್ರಶಸ್ತಿ’ ಪುರಸ್ಕೃತರ ಪಟ್ಟಿಯನ್ನು ಆಯ್ಕೆ ಸಮಿತಿ ಅಧ್ಯಕ್ಷ ಡಾ. ನಾ ಡಿಸೋಜ ಸಂದೇಶ ಪ್ರತಿಷ್ಠಾನದ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಕನ್ನಡ ಸಾಹಿತ್ಯ ಪ್ರಶಸ್ತಿಗೆ ವಿಮರ್ಶಕ ಗಿರಡ್ಡಿ ಗೋವಿಂದರಾಜ್, ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ ಎಡಿನೆಟ್ಟೊ ಜೆಪ್ಪು, ಕಲಾ ಪ್ರಶಸ್ತಿಗೆ ಅಶೋಕ ಗುಡಿಗಾರ, ಮಾಧ್ಯಮ ಪ್ರಶಸ್ತಿಗೆ ಎನ್.ಗುರುರಾಜ್, ಅಧ್ಯಾಪಕ ಪ್ರಶಸ್ತಿಗೆ ಕೆ.ಗಾದಿಲಿಂಗಪ್ಪ, ಕೊಂಕಣಿ ಸಂಗೀತ ಪ್ರಶಸ್ತಿಗೆ ವಿಲ್ಸನ್ ಒಲಿವೆರ, ವಿಶಿಷ್ಟ ಸಾಧಕ ಪ್ರಶಸ್ತಿಗೆ ಟಿ.ರಾಜ ಆಯ್ಕೆಯಾಗಿದ್ದಾರೆ.
ಜನವರಿ 13ರಂದು ಸಂಜೆ 5:30ಕ್ಕೆ ಸಂದೇಶ ಪ್ರತಿಷ್ಠಾನದ ಸಭಾಂಗಣದಲ್ಲಿ ಬಳ್ಳಾರಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಹೆನ್ರಿ ಡಿಸೋಜ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 25 ಸಾವಿರ ರೂ.ವನ್ನು ಒಳಗೊಂಡಿರುತ್ತದೆ. ಮುಖ್ಯ ಅತಿಥಿಯಾಗಿ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕಲ್ ಡಿಕುನ್ಹಾ, ಮಂಗಳೂರು ಬಿಷಪ್ ಎಲೋಶಿಯಸ್ ಪೌಲ್ ಡಿಸೋಜ, ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ, ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ ಪಾಲ್ಗೊಳ್ಳಲಿದ್ದಾರೆ.
ಗಿರಡ್ಡಿ ಗೋವಿಂದರಾಜ: ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಗೇರಿಯ ಪ್ರೊ. ಗಿರಡ್ಡಿ ಗೋವಿಂದರಾಜ 15 ವಿಮರ್ಶಾ ಸಂಕಲನಗಳು, 3 ಕವನ ಸಂಕಲನಗಳು,3 ಕಥಾಸಂಕಲನಗಳು, 15 ಸಂಪಾದಿತ ಗ್ರಂಥಗಳನ್ನು ರಚಿಸಿದ್ದಾರೆ.
ಎಡಿನೆಟ್ಟೋ, ಜೆಪ್ಪು: ಮಂಗಳೂರಿನ ಜೆಪ್ಪುವಿನ ಎಡ್ವಿನ್ ಮರಿಯಾಣ್ ನೆಟ್ಟೊ ಭಾರತೀಯ ವಾಯುಸೇನೆಯಲ್ಲಿ ಇಲೆಕ್ಟ್ರಿಷಿಯನ್ ಆಗಿ ಸೇರಿ ಬಳಿಕ ಮಿಸ್ಸಯಿಲ್ ಆಫೀಸರ್ ಆಗಿ ಪದೋನ್ನತಿ ಪಡೆದರು. ಚೀನಾ, ಪಾಕಿಸ್ತಾನ, ಬಾಂಗ್ಲಾ ವಿರುದ್ಧ ಯುದ್ಧಗಳಲ್ಲಿ ಭಾಗಿಯಾದ ಇವರು 5 ಮಿಲಿಟರಿ ಪದಕಗಳು ಹಾಗೂ ರಾಷ್ಟ್ರಪತಿ ಪುರಸ್ಕಾರ ಪಡೆದು ಸೇನೆಯಿಂದ ನಿವೃತ್ತರಾದರು. ಬಳಿಕ ಕೊಂಕಣಿಯಲ್ಲಿ 2 ಸಾವಿರಕ್ಕೂ ಅಧಿಕ ಲೇಖನ, 477 ಕತೆ, 27 ಕವಿತೆಗಳನ್ನು ಪ್ರಕಟಿಸಿದ್ದಾರೆ.
ಅಶೋಕ್ ಗುಡಿಗಾರ: ಬೆಂಗಳೂರು ಗ್ರಾಮಾಂತರದ ಬಿಡದಿಯ ಕೆ.ಎಚ್. ಕಾಲನಿಯ ಅಶೋಕ್ ಗುಡಿಗಾರ 20 ವರ್ಷಗಳಿಂದ ನಿರಂತರವಾಗಿ ಶಿಲ್ಪಕಲಾಕೃತಿಗಳ ನಿರ್ಮಾಣದಲ್ಲಿ ತೊಡಗಿರುವ ಇವರು ಸಾವಿರಾರು ಕಲ್ಲು, ಮರ, ಶ್ರೀಗಂಧಗಳನ್ನು ಶಿಲ್ಪಗಳನ್ನಾಗಿ ಪರಿವರ್ತಿಸಿದ್ದಾರೆ. ಕಂಚು, ಫೈಬರ್‌ಗಳಲ್ಲೂ ಆಕೃತಿಗಳ ನಿರ್ಮಾಣ ತರಬೇತಿ ನೀಡುತ್ತಾ ಬಂದಿದ್ದಾರೆ.
ಎನ್. ಗುರುರಾಜ್: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಸಗೋಡುವಿನ ಎನ್. ಗುರುರಾಜ್ ಉದಯವಾಣಿಯ ಉಪಸಂಪಾದಕ, ಸಂಪಾದಕರಾಗಿ 2013ರಲ್ಲಿ ನಿವೃತ್ತರಾದರು. ಸುದ್ದಿ ಸಂಪಾದನೆ, ಪುಟವಿನ್ಯಾಸ, ಮುಖಪುಟ ವಿನ್ಯಾಸ ಇತ್ಯಾದಿಗಳಿಗೆ ಹಲವಾರು ರಾಷ್ಟ್ರಮಟ್ಟದ ಪ್ರಶಸ್ತಿಗಳು ಸಂದಿವೆ.
ಕೆ. ಗಾದಿಲಿಂಗಪ್ಪ: ಬಳ್ಳಾರಿ ಜಿಲ್ಲೆಯ ಗೆಣಿಕೆಹಾಳುವಿನಲ್ಲಿ ಕೆ.ಗಾದಿಲಿಂಗಪ್ಪಶಿಕ್ಷಕ ವೃತ್ತಿಯೊಂದಿಗೆ ಅನಾಥ ಮಕ್ಕಳಿಗೆ 3 ತಿಂಗಳ ಅವಧಿಯ ವಸತಿ ಸಹಿತ ಉಚಿತ ನವೋದಯ ಕೋಚಿಂಗ್, 25 ಅನಾಥ ಮಕ್ಕಳು ಸ್ವಾವಲಂಬಿಗಳಾಗುವ ತನಕದ ಆರ್ಥಿಕ ನೆರವು, ಅಂಗವಿಕಲ ಮಕ್ಕಳಿಗೆ ಉಚಿತ ಮನೆಪಾಠ, ವೃದ್ಧಾಪ್ಯ ವೇತನ ದೊರಕಿಸಿಕೊಡುವುದು, ಹಂಪಿಯ ತುಂಗಭದ್ರಾ ನದಿ ದಂಡೆಯ ಹೆಣ್ಣುಮಕ್ಕಳಿಗೆ ಬಟ್ಟೆ ಬದಲಾಯಿಸಲು ಬೇಕಾಗುವ ಕುಟೀರ, ಸರಕಾರದ ಯೋಜನೆಗಳು ತಳಮಟ್ಟದಲ್ಲಿ ಕಾರ್ಯಗತವಾಗಲು ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ವಿಲ್ಸನ್ ಒಲಿವೆರ: ಕುಂದಾಪುರದ ಪಡುಕೋಣೆಯ ವಿಲ್ಸನ್ ಒಲಿವೆರ ಕೊಂಕಣಿಯ ಪ್ರಮುಖ ಹಾಡುಗಾರ ಹಾಗೂ ಸಂಗೀತ ನಿರ್ದೇಶಕ. 16ನೆ ವರ್ಷಕ್ಕೆ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ಒಲಿವೆರ ಹಲವು ಆಲ್ಬಮ್‌ಗಳನ್ನು ಹೊರತಂದರು. ಮಂಗಳೂರು, ಬೆಂಗಳೂರು, ಮುಂಬೈ, ಕತರ್, ಕುವೈಟ್, ಅಬುಧಾಬಿ, ಬಹರೈನ್, ಯುಎಇ ಮತ್ತಿತರ ಕಡೆ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಟಿ. ರಾಜ: 25 ವರ್ಷಗಳಿಂದ ಬೆಂಗಳೂರಿನ ಬೀದಿಗಳಲ್ಲಿದ್ದ ಹತ್ತುಸಾವಿರ ಭಿಕ್ಷುಕರು, ಮಾನಸಿಕ ರೋಗಿಗಳು, ಅಂಗವಿಕಲರು, ಅನಾಥರನ್ನು ರಕ್ಷಿಸಿದ ಆಟೋ ರಾಜ ಯಾನೆ ಟಿ.ರಾಜಾ ಬಾಲ್ಯದಲ್ಲಿ ಮನೆಬಿಟ್ಟು ಬಂದ ಅಲೆಮಾರಿ ಹುಡುಗ. 1997ರಲ್ಲಿ ‘ನ್ಯೂ ಆರ್ಕ್ ಮಿಷನ್ ಆಫ್ ಇಂಡಿಯಾ’ದ ಸ್ಥಾಪಕ ಕಾರ್ಯದರ್ಶಿಯಾದ ಇವರು 4 ಸಾವಿರಕ್ಕೂ ಅನಾಥ ಶವಗಳ ಸಂಸ್ಕಾರ ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ಡಾ.ನಾ.ದಾಮೋದರ ಶೆಟ್ಟಿ, ಚಂದ್ರಕಲಾ ನಂದಾವರ, ಸಂದೇಶ ಪ್ರತಿಷ್ಠಾನದ ಟ್ರಸ್ಟಿ ರಾಯ್ ಕ್ಯಾಸ್ಟಲಿನೋ, ಮಾಧ್ಯಮ ಸಮಿತಿಯ ಸಂಚಾಲಕ ಟೈಟಸ್ ನೊರನ್ಹೋ, ನಿರ್ದೇಶಕ ಅತಿ ವಂದನೀಯ ವಿಕ್ಟರ್ ವಿಜಯ್ ಲೋಬೊ, ಸಹ ನಿರ್ದೇಶಕ ವಿಕ್ಟರ್ ಕ್ರಾಸ್ತ ಉಪಸ್ಥಿತರಿದ್ದರು.







