ಶೂ, ಚಪ್ಪಲಿ ಮಳಿಗೆ ಸ್ಥಾಪನೆಗೆ 10ಲಕ್ಷ ರೂ.ಅನುದಾನ: ಎಚ್.ಆಂಜನೇಯ

ಬೆಂಗಳೂರು, ಡಿ.20: ತಾಲೂಕು, ಜಿಲ್ಲಾ ಮಟ್ಟದಲ್ಲಿ ಚಪ್ಪಲಿ ಹಾಗೂ ಶೂ ಮಾರಾಟದ ಶೋರೂಮ್ ತೆಗೆಯಲು ಇಚ್ಛಿಸುವ ಎಸ್ಸಿ, ಎಸ್ಟಿ ಸಮುದಾಯದ ಆಸಕ್ತರಿಗೆ 10 ಲಕ್ಷರೂ. ಅನುದಾನ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಬುಧವಾರ ಸಮಾಜ ಕಲ್ಯಾಣ ಇಲಾಖೆ ನಗರದ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಚರ್ಮ ಕುಶಲಕರ್ಮಿಗಳ ಸಮಾವೇಶ ಹಾಗೂ ಚರ್ಮ ಕರಕುಶಲ ವಸ್ತುಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದಲಿತ ಸಮುದಾಯ ಮಾತ್ರವೇ ಅನಾದಿ ಕಾಲದಿಂದಲೂ ಚರ್ಮದ ಉದ್ಯಮದಲ್ಲಿ ತೊಡಗಿಕೊಂಡು ಬಂದವರು. ಸತ್ತ ದನಗಳ ಚರ್ಮಗಳಿಂದ ಮೇಲ್ವರ್ಗದವರಿಗೆ ಚಪ್ಪಲಿ ತಯಾರಿಸಿಕೊಡುತ್ತಿದ್ದರು. ಕೃಷಿ ಸಲಕರಣೆಗಳನ್ನು ಮಾಡಿಕೊಡುತ್ತಿದ್ದರು. ಇಷ್ಟು ಉಪಕಾರ ಮಾಡಿದ ದಲಿತ ಸಮುದಾಯವನ್ನು ಮೇಲ್ವರ್ಗ ಅಸ್ಪಶ್ಯರಂತೆ ಚಪ್ಪಲಿಗಿಂತ ಕಡೆಯಾಗಿ ನಡೆಸಿಕೊಂಡಿದ್ದಾರೆ ಎಂದು ಅವರು ನೋವುಂಡರು.
ಚರ್ಮದ ಉದ್ಯಮಕ್ಕೆ ಬೇಡಿಕೆ ಹೆಚ್ಚಾದಂತೆ ದಲಿತರ ಕೈಯಲ್ಲಿದ್ದ ಚರ್ಮದ ಉದ್ಯಮವನ್ನು ಮೇಲ್ವರ್ಗದವರು ಆಕ್ರಮಿಸಿಕೊಂಡರು. ಬಾಟಾ, ವುಡ್‌ಲ್ಯಾಂಡ್ ಪ್ಯಾರಾಗಾನ್ ಸೇರಿದಂತೆ ಅಂತಾರಾಷ್ಟ್ರೀಯ ಕಂಪೆನಿಗಳು ಚರ್ಮೋದ್ಯಮದ ಎಲ್ಲ ಅವಕಾಶಗಳನ್ನು ಕಬಳಿಸಿಕೊಂಡರು. ದಲಿತರು ಎಂದಿನಂತೆ ರಸ್ತೆ ಪಕ್ಕದಲ್ಲಿ ಚಿಕ್ಕ ಗುಡಾರಗಳಲ್ಲಿಯೇ ಕಿತ್ತು ಹೋಗಿರುವ ಚಪ್ಪಲಿ, ಶೂಗಳನ್ನು ಹೊಲಿಯುತ್ತಾ ಅರೆ ಜೀವನ ನಡೆಸುತ್ತಿದ್ದಾರೆ ಎಂದು ಅವರು ವಿಷಾದಿಸಿದರು.
ದಲಿತರು ಉದ್ಯಮಿಗಳಾಗಬೇಕು: ಹಿಂದಿನ ಕಾಲದಲ್ಲಿ ಅವಕಾಶಗಳಿಲ್ಲದ ಕಾರಣ ಬಡವರಾಗಿ, ಕೂಲಿ ಕಾರ್ಮಿಕರಾಗಿ ಉಳಿಯಬೇಕಾಗಿತ್ತು. ಆದರೆ, ಕಾಲ ಬದಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಚರ್ಮದ ಉದ್ಯಮದಲ್ಲಿ ತೊಡಗಿರುವ ದಲಿತ ಸಮುದಾಯಕ್ಕೆ ಅನೇಕ ಅನುದಾನವನ್ನು ನೀಡಿದ್ದಾರೆ. ಅದೆಲ್ಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ದಲಿತ ಸಮುದಾಯದ ಉದ್ಯಮಿಗಳಾಗುವ ನಿಟ್ಟಿನಲ್ಲಿ ದಾಪುಗಾಲಿಡಬೇಕು. ಕನಿಷ್ಟ ತಾಲೂಕು, ಜಿಲ್ಲಾ ಮಟ್ಟದಲ್ಲಿ ಶೂ, ಚಪ್ಪಲಿ ಮಳಿಗೆಗಳನ್ನು ತೆರೆಯಬೇಕು. ಇದಕ್ಕೆ ಸರಕಾರ 10ಲಕ್ಷ ರೂ.ಅನುದಾನ ನೀಡಲಿದ್ದು, ಅದರಲ್ಲಿ 5ಲಕ್ಷ ರೂ.ಸಬ್ಸಿಡಿಯಿದೆ. ಇದನ್ನು ಯುವಕ-ಯುವತಿಯರು ಹೆಚ್ಚಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಎಚ್.ಆಂಜನೇಯ ತಿಳಿಸಿದರು.
ಪ್ರತಿ ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಹಾಗೂ ಪ್ರಮುಖ ಸ್ಥಳಗಳಲ್ಲಿ ಚರ್ಮ ಉತ್ಪನ್ನ ಮಾರಾಟ ಮಳಿಗೆಗಳನ್ನು ತೆರೆಯಲು ಆಯಾ ಜಿಲ್ಲಾ ಪಾಲಿಕೆಗಳು ಅವಕಾಶ ಮಾಡಿಕೊಡಬೇಕು. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪಾಲಿಕೆಗಳಿಗೆ ಸುತ್ತೋಲೆಯನ್ನು ಹೊರಡಿಸಲಿದ್ದಾರೆ ಎಂದು ಅವರು ಹೇಳಿದರು.
ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಸಾಕು ಪ್ರಾಣಿಗಳಿಂದ ಚರ್ಮ ಹೇರಳವಾಗಿ ಸಿಗುತ್ತಲಿದೆ. ಹಾಗೂ ಇತ್ತೀಚಿನ ದಿನಗಳಲ್ಲಿ ಚರ್ಮೋದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳಿವೆ. ಹೀಗಾಗಿ ಈಗಾಗಲೆ ಚರ್ಮೋದ್ಯಮದಲ್ಲಿ ತೊಡಗಿಕೊಂಡಿರುವ ದಲಿತ ಸಮುದಾಯಕ್ಕೆ ಅನುದಾನ ನೀಡುವ ಮೂಲಕ ಚರ್ಮದ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಓ.ಶಂಕರ್, ಕಾಂಗ್ರೆಸ್ ಮುಖಂಡ ಧರ್ಮಸೇನ, ಕೆಪಿಸಿಸಿ ಕಾರ್ಯದರ್ಶಿ ಮದನ್ ಪಟೇಲ್, ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮಿ ನಾರಾಯಣ ಮತ್ತಿತರರಿದ್ದರು.
ನನ್ನ ತಾತ ನೆಲಕ್ಕೆ ಗೋಣಿಚೀಲ ಹಾಸಿಕೊಂಡು ದಿನಪೂರ್ತಿ ಚಪ್ಪಲಿ ರಿಪೇರಿ ಮಾಡಿರೂ ದಿನದ ಕೊನೆಗೆ ಊಟಕ್ಕೆ ಸಾಲುತ್ತಿರಲಿಲ್ಲ. ಆ ಸಂದರ್ಭದಲ್ಲಿ ಸರಕಾರದ ವತಿಯಿಂದ ಯಾವುದೇ ಸೌಲಭ್ಯಗಳು ಇರಲಿಲ್ಲ. ಈಗ ಚರ್ಮದ ಉದ್ಯಮದಲ್ಲಿ ತೊಡಗಿರುವವರಿಗೆ ಮಳಿಗೆ ಸ್ಥಾಪಿಸಲು, ಮನೆ ಕಟ್ಟಿಕೊಳ್ಳಲು, ಮಕ್ಕಳ ವಿದ್ಯಾಭ್ಯಾಸಕ್ಕೆ ಹಲವು ಯೋಜನೆಗಳನ್ನು ರೂಪಿಸಿವೆ. ಇದನ್ನು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು.
-ಎಚ್.ಆಂಜನೇಯ ಸಚಿವ ಸಮಾಜ ಕಲ್ಯಾಣ ಇಲಾಖೆ
ರಸ್ತೆಗಳ ಬದಿಗಳಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ತೆರೆದಿರುವ ಚಪ್ಪಲಿ, ಶೂ ರಿಪೇರಿ, ತಯಾರಿಕೆ ಹಾಗೂ ಮಾರಾಟ ಮಾಡುವ ಚರ್ಮ ಉತ್ಪನ್ನಗಳ ಮಳಿಗೆಗಳಿಗೆ ತೊಂದರೆ ಕೊಡಬಾರದು. ಇನ್ನು ಅಗತ್ಯವಿರುವೆಡೆ ಮಳಿಗೆಗಳು ತೆರೆಯಲು ಪ್ರೋತ್ಸಾಹ ನೀಡಬೇಕು. ಇದರಿಂದ ಸ್ವಲ್ಪ ಮಟ್ಟಿನ ನಿರುದ್ಯೋಗ ನಿವಾರಣೆಯಾಗಲಿದೆ.
-ರಾಮಲಿಂಗಾರೆಡ್ಡಿ ಗೃಹ ಸಚಿವ
ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಡಿ.20ರಿಂದ 24ರವರೆಗೆ ಚರ್ಮದಿಂದ ಮಾಡಿರುವ ವಿವಿಧ ವಿನ್ಯಾಸದ ಶೂ, ಚಪ್ಪಲಿ, ಹ್ಯಾಂಡ್ ಬ್ಯಾಗ್, ಪರ್ಸ್ ಸೇರಿದಂತೆ ಉಡುಪುಗಳು ಮಾರಾಟಕ್ಕಿದೆ. ಅತ್ಯಂತ ಕಡಿಮೆ ದರದಲ್ಲಿ ಈ ಸಿದ್ಧ ಉಡುಪುಗಳು ಸಿಗುತ್ತಿದ್ದು, ಇದರ ಉಪಯೋಗವನ್ನು ಜನತೆ ಮಾಡಿಕೊಳ್ಳಬೇಕು. ಆ ಮೂಲಕ ಚರ್ಮದ ಉದ್ಯಮದ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು.
-ಓ.ಶಂಕರ್ ಅಧ್ಯಕ್ಷ, ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ







