ಇಂದಿರಾಗಾಂಧಿ ಬಳಿ ಇದ್ದದ್ದು 18 ರಾಜ್ಯಗಳು, ನಮ್ಮ ಬಳಿ 19 ರಾಜ್ಯಗಳಿವೆ: ಪ್ರಧಾನಿ ಮೋದಿ

ಹೊಸದಿಲ್ಲಿ, ಡಿ.20 : ‘‘ಇದು ನಮಗೆ ಒಂದು ದೊಡ್ಡ ಜಯ, ನಾವೀಗ 19 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದೇವೆ. ಇಂದಿರಾ ಗಾಂಧಿ ಅಧಿಕಾರದಲ್ಲಿದ್ದಾಗ ಅವರ ಪಕ್ಷ 18 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು,’’ ಎಂದು ಪ್ರಧಾನಿ ನರೇಂದ್ರ ಮೊದಿ ಹೇಳಿದ್ದಾರೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯ ಚುನಾವಣಾ ವಿಜಯದ ನಂತರ ಪ್ರಥಮ ಬಾರಿಗೆ ಸಭೆ ಸೇರಿದ ಬಿಜೆಪಿ ಸಂಸದರನ್ನು ಉದ್ದೇಶಿಸಿ ಮಾತನಾಡಿದಾಗ ಮೋದಿ ಭಾವೋದ್ವೇಗಕ್ಕೊಳಗಾಗಿದ್ದರು. ಮುಂದೆ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಹಾಗೂ 2019ರಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ಪಕ್ಷ ಕಾರ್ಯಕರ್ತರು ಹಾಗೂ ನಾಯಕರು ಯಾವುದೇ ರೀತಿಯಲ್ಲಿ ಈಗಿನ ನಿರ್ವಹಣೆಯಿಂದಲೇ ಸಂತೃಪ್ತರಾಗಬಾರದು ಎಂದು ಅವರು ಎಚ್ಚರಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿ ದೇಶಾದ್ಯಂತ ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವಂತೆಯೂ ಮೋದಿ ಕರೆ ನೀಡಿದ್ದಾರೆ.
1985ರಿಂದ ಪ್ರಥಮ ಬಾರಿಗೆ ಗುಜರಾತ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಗರಿಷ್ಠ ಸ್ಥಾನ ಪಡೆದಿರುವುದರಿಂದ ಇದು ಪಕ್ಷಕ್ಕೆ ದೊರೆತ ನೈತಿಕ ವಿಜಯ ಎಂದು ಕಾಂಗ್ರೆಸ್ ಹೇಳಿಕೊಂಡಿರುವುದಕ್ಕೆ ಸಭೆಯ ನಂತರ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಅನಂತ್ ಕುಮಾರ್, ‘‘ಕಾಂಗ್ರೆಸ್ ಪಕ್ಷ ತನ್ನ ಸೋಲಿನಲ್ಲೂ ವಿಜಯವನ್ನು ಕಾಣುವ ಹಾಸ್ಯಾಸ್ಪದ ಪ್ರಯತ್ನ ನಡೆಸುತ್ತಿದೆ,’’ ಎಂದು ಹೇಳಿದರು. ‘‘ವಿಪಕ್ಷವು ಬಿಜೆಪಿಯತ್ತ ಎಲ್ಲಾ ವಿಧದ ಅನಗತ್ಯ ಆರೋಪಗಳನ್ನು ಮಾಡಿದೆ ಹಾಗೂ ಪ್ರಧಾನಿಯ ಅರ್ಹತೆಯನ್ನೂ ಪ್ರಶ್ನಿಸಿದೆ, ಇದು ಸರಿಯಲ್ಲ’’ ಎಂದು ಅವರು ಹೇಳಿದ್ದಾರೆ.







