ನವ ಜೋಡಿಗೆ ಸರಕಾರದಿಂದ 50 ಸಾವಿರ ರೂ.ಪ್ರೋತ್ಸಾಹ ಧನ: ಸಚಿವ ಆಂಜನೇಯ
ಹೊಳಲ್ಕೆರೆಯಲ್ಲಿ ಡಿ.27ಕ್ಕೆ ನೂರು ಜೋಡಿಗಳ ಉಚಿತ ಸಾಮೂಹಿಕ ವಿವಾಹ

ಬೆಂಗಳೂರು, ಡಿ. 20: ಮಾಜಿ ಪ್ರಧಾನಿ ಇಂದಿರಾಗಾಂಧಿಯವರ 100ನೆ ಜನ್ಮ ಶತಮಾನೋತ್ಸವದ ಅಂಗವಾಗಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದಲ್ಲಿ ನೂರು ಜೋಡಿಗಳ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಏರ್ಪಡಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವಿವಾಹವಾಗುವ ಎಸ್ಸಿ-ಎಸ್ಟಿ ವರ್ಗದ ಜೋಡಿಗಳಿಗೆ ರಾಜ್ಯ ಸರಕಾರದಿಂದ 50ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು.
ಅಲ್ಲದೆ, ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸುವ ಆಯೋಜಕರಿಗೆ ಒಂದು ಜೋಡಿಗೆ 2ಸಾವಿರ ರೂ.ನಂತೆ ಸರಕಾರ ನೀಡಲಿದ್ದು, ಈ ಯೋಜನೆ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಸಾಮೂಹಿಕ ವಿವಾಹಗಳನ್ನು ಹೆಚ್ಚೆಚ್ಚು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ವಧು-ವರರಿಗೆ ಸಿಎಂ ಆಶೀರ್ವಾ: ಡಿ.27ಕ್ಕೆ ಹೊಳಲ್ಕೆರೆ ಕೊಟ್ರನಂಜಪ್ಪ ಕಾಲೇಜು ವೆೆುದಾನದಲ್ಲಿ ಏರ್ಪಡಿಸಿರುವ ಉಚಿತ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಭಾಗವಹಿಸಲಿದ್ದು, ವಧು-ವರರನ್ನು ಆಶೀರ್ವದಿಸಲಿದ್ದಾರೆಂದು ಆಂಜನೇಯ ತಿಳಿಸಿದರು.
ಸಾಮೂಹಿಕ ವಿವಾಹದಲ್ಲಿ ಮದುವೆ ಆಗಬಯಸುವ ಯುವಕ-ಯುವತಿಯರು ಅರ್ಜಿಯೊಂದಿಗೆ ಹುಟ್ಟಿದ ದಿನಾಂಕ, ವಾಸ ಸ್ಥಳ, ವಿಳಾಸ ದೃಢೀಕರಣ ದಾಖಲೆ ಲಗತ್ತಿಸಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಅರ್ಹ ಜೋಡಿಗಳು ಉಪ ನೋಂದಣಾಧಿಕಾರಿ ಅವರ ಕಚೇರಿಯಲ್ಲಿ ವಿವಾಹ ನೋಂದಾಯಿಸಿಕೊಳ್ಳಬೇಕು ಎಂದರು.
ಮೂರು ವರ್ಷಗಳಲ್ಲಿ ತನ್ನ ಪುತ್ರಿಯ ವಿವಾಹವೂ ಸೇರಿದಂತೆ 366 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಮಾಡಿಸಿದ್ದು, ಬಡ-ಮಧ್ಯಮ ವರ್ಗದ ಜನ ವರದಕ್ಷಿಣೆ ಮತ್ತು ದುಬಾರಿ ಮದುವೆಗಳಿಂದ ಸಿಲುಕಿ ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸಲು ಸಾಮೂಹಿಕ ವಿವಾಹಗಳು ಹೆಚ್ಚಾಗಬೇಕು ಎಂದು ಅವರು ಹೇಳಿದರು.
ಬಾಕ್ಸ್...
‘ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮದುವೆ ಆಗುವ ಜೋಡಿಗಳಿಗೆ ತಾಳಿ, ಕಾಲುಂಗುರ, ಮಂಗಳ ವಸ್ತ್ರಗಳನ್ನು ಉಚಿತವಾಗಿ ನೀಡಲಾಗುವುದು. ಹೊಳಲ್ಕೆರೆ ತಾಲೂಕಿನ ಇತರೆ ಸಮುದಾಯದ ವಧು-ವರ ಜೋಡಿಗೆ 25ಸಾವಿರ ರೂ.ಕೊಡುಗೆ ನೀಡಲಾಗುವುದು’
-ಎಚ್.ಆಂಜನೇಯ ಸಮಾಜ ಕಲ್ಯಾಣ ಸಚಿವ







