ಪಕ್ಷದಲ್ಲಿ ಯುವಜನರಿಗೆ ಪ್ರೋತ್ಸಾಹ: ಮೋದಿ ಸಲಹೆ

ಹೊಸದಿಲ್ಲಿ, ಡಿ.20: ಪಕ್ಷದೊಳಗೆ ಮತ್ತು ಹೊರಗೆ ಯುವಜನತೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಮೋದಿ, ಪಕ್ಷವನ್ನು ಬೂತ್‌ಮಟ್ಟದಿಂದ ಬಲಪಡಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡು ಭಾವುಕರಾದರು ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ಕುಮಾರ್ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಗುಜರಾತ್‌ನಲ್ಲಿ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೆವಾನಿ ಹಾಗೂ ಅಲ್ಪೇಶ್ ಠಾಕೂರ್ ಸೇರಿದಂತೆ ಯುವ ಮುಖಂಡರು ಕಾಂಗ್ರೆಸ್ ಜೊತೆ ಕೈಜೋಡಿಸಿದ ಕಾರಣ ಬಿಜೆಪಿ ಪ್ರಯಾಸದ ಗೆಲುವು ಪಡೆದಿದೆ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ, ಯುವಜನತೆಗೆ ಪಕ್ಷದಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುವ ಕುರಿತು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ. 2000ನೇ ಇಸವಿಯ ಬಳಿಕ ಹುಟ್ಟಿದ ಮತದಾರರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. 2019ರ ಮಹಾಚುನಾವಣೆ ಸಂದರ್ಭ ಇವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಕಾರಣ ಪಕ್ಷಕ್ಕೆ ಬಲ ತುಂಬಲಿದ್ದಾರೆ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.





