ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಡಿ.23 ರಂದು ರಾಜಭವನಕ್ಕೆ ಮುತ್ತಿಗೆ
ಬೆಂಗಳೂರು, ಡಿ.20: ಮಹಾದಾಯಿ, ಕಳಸಾಬಂಡೂರಿ ಯೋಜನೆಯನ್ನು ಜಾರಿಗೆ ತರಲು ಕೇಂದ್ರ, ರಾಜ್ಯ ಸರಕಾರಗಳ ನಿರ್ಲಕ್ಷ ಧೋರಣೆ ಖಂಡಿಸಿ ಡಿ.23 ರಂದು ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳಿಂದ ಮಹಾದಾಯಿ ಕಳಸಾ ಬಂಡೂರಿ ನೀರು ಹರಿಸುವಂತೆ ರೈತರು ಹೋರಾಟ ನಡೆಸಿ, ಪ್ರಾಣ ಕಳೆದುಕೊಂಡಿದ್ದಾರೆ. ಕರ್ನಾಟಕದ ಬಿಜೆಪಿ ಸಂಸದರು ಮಹಾದಾಯಿ-ಕಳಸಾಬಂಡೂರಿ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರದ ಗಮನ ಸೆಳೆಯುವಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಾದಾಯಿ, ಕಳಸಾಬಂಡೂರಿ ಯೋಜನೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ಡಿ.23 ರಂದು ಕನ್ನಡ ಒಕ್ಕೂಟದ ಸಾ.ರಾ.ಗೋವಿಂದು, ಪ್ರವೀಣ್ ಶೆಟ್ಟಿ, ಕುಮಾರ್, ಶಿವರಾಮೇಗೌಡ ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಕನ್ನಡ ಹೋರಾಟಗಾರರು ರಾಜಭವನ ಮುತ್ತಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ನಾಲ್ಕು ಬಾರಿ ಭೇಟಿ ನೀಡಿದ್ದಾರೆ. ಆದರೆ, ಮಹಾದಾಯಿ, ಕಳಸಾಬಂಡೂರಿ ಬಗ್ಗೆ ಪ್ರಸ್ತಾಪವಿಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿ ಬಿಜೆಪಿಯವರೆ ಆಗಿರುವುದರಿಂದ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬಹುದಿತ್ತು. ಈ ವಿಚಾರದಲ್ಲಿ ಕರ್ನಾಟಕದ ಸಂಸದರು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಹೇಳಿದರು.
ಮಹಾದಾಯಿ ಯೋಜನೆಗೆ ತಾರ್ಕಿಕ ಅಂತ್ಯ ನೀಡದಿದ್ದಲ್ಲಿ ನಿರಂತರ ಹೋರಾಟ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ಕನ್ನಡ ಒಕ್ಕೂಟ ನಿರ್ಧರಿಸಿದೆ ಎಂದ ಅವರು, 1956ರಿಂದ ಅಧಿಕಾರಕ್ಕೆ ಬಂದ ಸರಕಾರಗಳು ಹೈದರಾಬಾದ್-ಕರ್ನಾಟಕಕ್ಕೆ ಮೋಸ ಮಾಡುತ್ತಾ ಬಂದಿವೆ ಎಂದು ದೂರಿದರು.
ಚುನಾವಣೆ ಸಮೀಪಿಸುತ್ತಿದಂತೆ ಎಲ್ಲ ರಾಜಕೀಯ ಪಕ್ಷಗಳಿಗೂ ಹೈದರಬಾದ್ ಕರ್ನಾಟಕದ ಮೇಲೆ ವಿಶೇಷ ಪ್ರೀತಿ ಬಂದಿದೆ. ಇದೆಲ್ಲಾ ಜನರಿಗೆ ಮೋಸ ಮಾಡುವ ಗಿಮಿಕ್ ಎಂದು ವಾಟಾಳ್ ನಾಗರಾಜ್ ಹೇಳಿದರು.
ಸತ್ಯಾಗ್ರಹ: ಮೇಕೆದಾಟು ಯೋಜನೆ ಆರಂಭಿಸುವಂತೆ ಒತ್ತಾಯಿಸಿ, ಡಿ.26ರಂದು ರಾಮನಗರದಲ್ಲಿ ರಸ್ತೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮ್ಯೂಸಿಯಂ: ಬೆಂಗಳೂರು ಅರಮನೆ ಪ್ರಪಂಚದ ಆಕರ್ಷಣೆಗಳಲ್ಲೊಂದಾಗಿದೆ. ಮೈಸೂರು ಅರಮನೆ ಮಾದರಿಯಲ್ಲಿ ಬೆಂಗಳೂರು ಅರಮನೆಯನ್ನು ಮ್ಯೂಸಿಯಂ ಮಾಡಿದರೆ ಪ್ರಪಂಚದ ಜನತೆ ನೋಡಲು ಬರುತ್ತಾರೆ. ಆದ್ದರಿಂದ, ಮ್ಯೂಸಿಯಂ ಆಗಿ ಪರಿವರ್ತಿಸಬೇಕೆಂದರು. ಸುದ್ದಿಗೋಷ್ಠಿಯಲ್ಲಿ ಸಾ.ರಾ.ಗೋವಿಂದು, ಕೆ.ಆರ್.ಕುಮಾರ್, ಸೇರಿದಂತೆ ಪ್ರಮುಖರಿದ್ದರು.







