ಕಾಂಡೋಮ್ ಜಾಹೀರಾತುಗಳನ್ನು ಪ್ರೈಂ ಟೈಂನಲ್ಲಿ ಪ್ರಸಾರ ಮಾಡಲು ಯಾಕೆ ಸಾಧ್ಯವಿಲ್ಲ?: ಉಚ್ಛನ್ಯಾಯಾಲಯ

ಹೊಸದಿಲ್ಲಿ, ಡಿ.20: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಕೇಂದ್ರ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿಗೆ ನೊಟೀಸ್ ಜಾರಿ ಮಾಡಿರುವ ರಾಜಸ್ಥಾನ ಉಚ್ಛನ್ಯಾಯಾಲಯ ಕಾಂಡೋಮ್ ಜಾಹೀರಾತುಗಳನ್ನು ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆಯ ಅವಧಿಯಲ್ಲಿ ಪ್ರಸಾರ ಮಾಡಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದೆ.
ಡಿಸೆಂಬರ್ 10ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ಕಾಂಡೋಮ್ ಜಾಹೀರಾತುಗಳನ್ನು ಕೇವಲ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯ ಮಧ್ಯೆ ಪ್ರಸಾರ ಮಾಡಬಹುದು. ಆದರೆ ಪ್ರೈಂ ಟೈಂನಲ್ಲಿ ಈ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಸೂಚಿಸಿತ್ತು. ಕಾಂಡೋಮ್ ಜಾಹೀರಾತುಗಳಿಂದಾಗಿ ಮಕ್ಕಳು ಅಸಭ್ಯ ಮತ್ತು ತಕ್ಕುದಲ್ಲದ ವಿಷಯಗಳಿಗೆ ತೆರೆಯಲ್ಪಡುತ್ತಾರೆ ಎಂದು ಸಚಿವಾಲಯ ತಿಳಿಸಿತ್ತು.
ಕಾಂಡೋಮ್ ಜಾಹೀರಾತುಗಳ ಬಗ್ಗೆ ಅನೇಕ ವೀಕ್ಷಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (ಎಎಸ್‌ಸಿಐ) ಯು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಲಹೆಯನ್ನು ಕೋರಿತ್ತು. ಕಾಂಡೋಮ್‌ಗಳಲ್ಲಿರುವ ವಿಷಯ ವಯಸ್ಕರಿಗಾಗಿ ಮಾಡಲ್ಪಟ್ಟಿದ್ದು ಪ್ರೈಂ ಟೈಂನಲ್ಲಿ ಈ ಜಾಹೀರಾತುಗಳನ್ನು ಪ್ರಸಾರ ಮಾಡಬಾರದು ಎಂದು ಈ ದೂರುಗಳಲ್ಲಿ ಮನವಿ ಮಾಡಲಾಗಿತ್ತು.
ಈ ಎಲ್ಲಾ ಸಮಸ್ಯೆಗಳ ಮೂಲ ಮ್ಯಾನ್‌ಫೋರ್ಸ್ ಎಂಬ ಕಾಂಡೋಮ್‌ನ ಜಾಹೀರಾತು ಎಂದು ಹೇಳಲಾಗುತ್ತಿದ್ದು ಈ ಸಂಸ್ಥೆಯು ನಟಿ ಸನ್ನಿ ಲಿಯೋನ್‌ರನ್ನು ಬಳಸಿ ಹಲವು ಜಾಹೀರಾತುಗಳನ್ನು ರಚಿಸಿದೆ.
ಗುಜರಾತ್‌ನಲ್ಲಿ ಈ ಸಂಸ್ಥೆಗೆ ಸೇರಿದ ಜಾಹೀರಾತು ಫಲಕಗಳಲ್ಲಿ ಬರೆಯಲಾಗಿದ್ದ ಸಂದೇಶದಿಂದಾಗಿ ವಿವಾದ ಸೃಷ್ಟಿಯಾಗಿತ್ತು.
ಇದು ಧಾರ್ಮಿಕ ಭಾವನೆಗಳಿಗೆ ಮಾಡಿದ ಅವಮಾನ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು. ಸಂಸ್ಥೆ ಆ ಜಾಹೀರಾತು ಫಲಕಗಳನ್ನು ತೆಗೆದುಹಾಕಿದ್ದರೂ ಈ ಬಗೆಗಿನ ವಿವಾದ ಮಾತ್ರ ಅಂತ್ಯ ಕಂಡಿರಲಿಲ್ಲ.







