ಮಕ್ಕಳಲ್ಲಿ ಮಾನವೀಯತೆಯ ಆಸ್ತಿ ಸಮೃದ್ಧವಾಗಬೇಕು: ರಾಧಾಕೃಷ್ಣ ಭಟ್
ಹಾರಾಡಿ ಶಾಲೆಯಲ್ಲಿ ರಾಷ್ಟ್ರೀಯ ಆವಿಷ್ಕಾರ ಅಭಿಯಾನ

ಪುತ್ತೂರು, ಡಿ. 20: ಪೋಷಕರ ಅತಿಯಾದ ಆಕಾಂಕ್ಷೆ, ಆಶೋತ್ತರಗಳು ವಿದ್ಯಾರ್ಥಿಗಳಿಗೆ ಹೊರೆಯಾಗುವಂತಹ ಒತ್ತಡ ಒಳಿತಲ್ಲ. ವಿಜ್ಞಾನ ತಂತ್ರಜ್ಞಾನಗಳ ಅವಕಾಶಗಳ ಜೊತೆಗೆ ಮಕ್ಕಳಲ್ಲಿ ಮಾನವೀಯತೆಯು ಆಸ್ತಿಯಾಗುವಂತೆ ಪ್ರಯತ್ನಿಸಬೇಕು ಎಂದು ವಿಠಲ ಪದವಿಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ರಾಧಾಕೃಷ್ಣ ಭಟ್ ಹೇಳಿದರು.
ಅವರು ಬುಧವಾರ ಪುತ್ತೂರಿನ ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ರಾಷ್ಟ್ರಿಯ ಆವಿಷ್ಕಾರ ಅಭಿಯಾನದ ವಿಜ್ಞಾನ ಮತ್ತು ಗಣಿತ ಶಿಕ್ಷಕರ ತರಬೇತಿ ಕಾರ್ಯಾಗಾರ ಹಾಗೂ ವಿಜ್ಞಾನ ಮತ್ತು ಗಣಿತ ಮಾದರಿಗಳ ಪ್ರದರ್ಶನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ನಮ್ಮ ಮಕ್ಕಳು ನಮ್ಮೆಲ್ಲರ ಕನಸಿನ ಪ್ರತಿರೂಪಗಳು. ಅವರನ್ನು ಸಹಜ ವಿಕಾಸದೆಡೆಗೆ ನಡೆಸುವ ಜವಾಬ್ದಾರಿ ನಮ್ಮದಾಗಬೇಕು ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ದಿನೇಶ್ ಮಾಚಾರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನದ ಕುರಿತಾದ ಆಸಕ್ತಿ ಬೆಳೆಸುವ ಕಾರ್ಯ ನಡೆಯಬೇಕಿದೆ. ಕುತೂಹಲ ಹೊಂದಿರುವ ಪ್ರತಿ ಮಗುವೂ ವಿಜ್ಞಾನಿಯೇ ಅದನ್ನು ಗುರುತಿಸುವ ಕೆಲಸವಾಗಬೇಕು ಎಂದರು.
ಹಾರಾಡಿ ಶಾಲೆಯ ನಿವೃತ್ತ ಶಿಕ್ಷಕಿ ರತ್ನಮ್ಮ. ವಿ. ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಪ್ರತಿಮಾ ಯು. ರೈ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಬಿ.ಎಡ್ ಕಾಲೇಜಿನ ಉಪನ್ಯಾಸಕಿ ಅನುರಾಧ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಅಬೂಬಕ್ಕರ್ ಬಲ್ನಾಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಮುದರ. ಎಸ್. ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪ್ರೌಢಶಾಲಾ ಸಹಶಿಕ್ಷಕಿ ಪ್ರಿಯಾಕುಮಾರಿ ವಂದಿಸಿದರು. ಸಹಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರ್ವಹಿಸಿದರು.
ಹಾರಾಡಿ, ಕೋಡಿಂಬಾಡಿ ಹಾಗೂ ಪುರಸಭೆ ಕ್ಲಸ್ಟರ್ ವ್ಯಾಪ್ತಿಯ ಸುಮಾರು ಮೂವತ್ತರಷ್ಟು ಗಣಿತ-ವಿಜ್ಞಾನ ಶಿಕ್ಷಕರು ಹಾಗೂ ಮೂವತ್ತೈದರಷ್ಟು ಬಿ.ಎಡ್ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಳಗಿನ ಗಣಿತ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ರಾಧಾಕೃಷ್ಣ ಭಟ್ ಹಾಗೂ ಅಪರಾಹ್ನದ ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಪಶುಪತಿ ಶಾಸ್ತ್ರಿ ಮೂಡಬಿದಿರೆ ತರಗತಿ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಹಾರಾಡಿ ಶಾಲಾ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ, ತಂತ್ರಜ್ಞಾನ, ಗಣಿತ ವಿಷಯಾಧಾರಿತ ಮಾದರಿಗಳ ಪ್ರದರ್ಶನ ಹಾಗೂ ರಂಗವಲ್ಲಿ ಪ್ರದರ್ಶನಗಳು ನಡೆದವು.







