ಡಿ. 22ರಿಂದ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವ
ಮಂಗಳೂರು, ಡಿ. 20: ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವ ಡಿ.22ರಿಂದ 31ರ ತನಕ ನಡೆಯಲಿದೆ. 31ರಂದು ಸಮಾರೋಪ ಸಮಾರಂಭದಲ್ಲಿ ಕರಾವಳಿ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕರಾವಳಿ ಉತ್ಸವ ಮೈದಾನ, ಕದ್ರಿ ಉದ್ಯಾನವನ ಮತ್ತು ಪಣಂಬೂರು ಕಡಲ ತೀರದಲ್ಲಿ ಈ ಬಾರಿ ಉತ್ಸವ ನಡೆಯಲಿದೆ. ಜಿಲ್ಲಾಡಳಿತದ ಜತೆಗೆ ಜಿಲ್ಲೆಯ ನಾಗರಿಕರು ಕೈಜೋಡಿಸಿ ಉತ್ಸವ ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.
ಉತ್ಸವ ಉದ್ಘಾಟನೆ ಡಿ. 22ರಂದು ಸಂಜೆ 3.30ಕ್ಕೆ ನೆಹರು ಮೈದಾನದಿಂದ ಕರಾವಳಿ ಉತ್ಸವ ಮೈದಾನ ವರೆಗೆ ಕರಾವಳಿ ಉತ್ಸವ ಮೆರವಣಿಗೆ ನಡೆಯಲಿದೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಮೆರವಣಿಗೆಯನ್ನು ಉದ್ಘಾಟಿಲಿದ್ದಾರೆ. ಸಂಜೆ 5.30ಕ್ಕೆ ಕರಾವಳಿ ಉತ್ಸವ ಅಂಗವಾಗಿ ಕರಾವಳಿ ಉತ್ಸವ ಮೈದಾನದಲ್ಲಿ ವಸ್ತು ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಬಳಿಕ ಆರು ಗಂಟೆಗೆ ಕರಾವಳಿ ಉತ್ಸವವನ್ನು ಬಹುಭಾಷಾ ಚಿತ್ರನಟ ಪ್ರಕಾಶ್ ರೈ ಉದ್ಘಾಟಿಸಲಿದ್ದಾರೆ. ಶಾಸಕ ಜೆ.ಆರ್. ಲೋಬೊ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಹೇಳಿದರು.
ಉತ್ಸವದ ಅಂಗವಾಗಿ ಡಿ. 22ರಿಂದ 31ರ ತನಕ ಕರಾವಳಿ ಉತ್ಸವ ಮೈದಾನ ಮತ್ತು ಕದ್ರಿ ಉದ್ಯಾನವನದಲ್ಲಿ ಸಂಜೆ ಆರು ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಬಾರಿಯೂ ಯುವ ಉತ್ಸವ ಆಯೋಜಿಸಿದ್ದು, ಆ ಪ್ರಯುಕ್ತ ಡಿ.28 ಮತ್ತು 29ರಂದು ಕದ್ರಿ ಉದ್ಯಾನವನದಲ್ಲಿ ಸಂಜೆ ಐದು ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕ್ರೀಡಾಕೂಟ: ಡಿ.23ರಂದು ಬೆಳಗ್ಗೆ 9 ಗಂಟೆಗೆ ಕರಾವಳಿ ಉತ್ಸವ ಮೈದಾನದಲ್ಲಿ ಮಂಗಳೂರು ತಾಲೂಕು ಮಟ್ಟದ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕಬಡ್ಡಿ ಪಂದ್ಯಾಟ ಹಾಗೂ ಪುರುಷ ಮತ್ತು ಮಹಿಳೆಯರಿಗೆ ಮುಕ್ತ ತ್ರೋಬಾಲ್ ಪಂದ್ಯಾಟ ನಡೆಯಲಿದೆ. ಡಿ.27ರಂದು ಬೆಳಗ್ಗೆ 9 ಗಂಟೆಗೆ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಪದವಿ ಕಾಲೇಜು ಪುರುಷ ವಿದ್ಯಾರ್ಥಿಗಳಿಗೆ ನೆಟ್‌ಬಾಲ್ ಪಂದ್ಯಾಟ ನಡೆಯಲಿದೆ ಎಂದರು.
ಬೀಚ್ ಉತ್ಸವ: ಡಿ. 29, 30, 31ರಂದು ಪಣಂಬೂರು ಕಡಲ ಕಿನಾರೆಯಲ್ಲಿ ಬೀಚ್ ಉತ್ಸವ ಆಯೋಜಿಸಿದ್ದು, ಆ ಪ್ರಯುಕ್ತ ಬೆಳಗ್ಗೆ ವಿವಿಧ ಕ್ರೀಡಾಕೂಟಗಳು ಜರುಗಲಿವೆ. ಸಂಜೆ ಆಹಾರೋತ್ಸವ ಹಾಗೂ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
ಪ್ರಶಸ್ತಿ ಪ್ರದಾನ: ಡಿ.31ರಂದು ಸಂಜೆ 5.30ಕ್ಕೆ ಪಣಂಬೂರು ಕಡಲ ತೀರದಲ್ಲಿ ಕರಾವಳಿ ಉತ್ಸವದ ಸಮಾರೋಪ ಸಮಾರಂಭ ಹಾಗೂ ಕರಾವಳಿ ಗೌರವ ಪ್ರಶಸಿತಿ ಪ್ರದಾನ ನಡೆಯಲಿದೆ. ಜಿಲ್ಲಾ ಉಸುತಿವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಹಾರ ಸಚಿವ ಯು.ಟಿ.ಖಾದರ್, ಶಾಸಕಿ ಶಕುಂತಳಾ ಟಿ.ಶೆಟ್ಟಿಘಿ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಜಿಲ್ಲಾಕಾರಿ ಸಸಿಕಾಂತ್ ಸೆಂಥಿಲ್, ಜಿಲ್ಲಾ ಪಂಚಾಯತ್ ಸಿಇಒ ಡಾ.ಎಂ.ಆರ್.ರವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಎಕ್ಸ್‌ಪರ್ಟ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ನರೇಂದ್ರ ಎಲ್. ನಾಯಕ್ ಮತ್ತಿತರರು ಉಪಸ್ಥಿತರಿದ್ದರು.







