ಜಾತಿ, ಧರ್ಮ ವಿಭಜಿಸುವ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ: ಕೆ.ಎಸ್. ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗ, ಡಿ. 20: 'ಸಿಎಂ ಸಿದ್ದರಾಮಯ್ಯ ಕೇವಲ ತಮ್ಮ ಅಧಿಕಾರವನ್ನು ಧರ್ಮ, ಜಾತಿ ಒಡೆಯಲು ಬಳಸುತ್ತಿದ್ದಾರೆ. ಅವರು ತಮ್ಮ ಈ ಚಾಳಿಯನ್ನು ಮುಂದುವರೆಸಿದರೆ ಗುಜರಾತ್, ಹಿಮಾಚಲ ಪ್ರದೇಶದ ರೀತಿಯಲ್ಲಿ ಕರ್ನಾಟಕದಲ್ಲಿಯೂ ಕಾಂಗ್ರೆಸ್ ನಿರ್ನಾಮವಾಗುವುದರಲ್ಲಿ ಅನುಮಾನವಿಲ್ಲವಾಗಿದೆ' ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದ ಅವರು ಹಿಂದುಳಿದ, ದಲಿತರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿದ್ದ ಹಣವನ್ನು ಅವರು ಖರ್ಚುಮಾಡಿಲ್ಲ. ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಅಡಿಯಲ್ಲಿ ತಿಂಗಳಿಗೆ 1500 ರೂ. ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ 1 ರೂ. ಅನ್ನು ಬಿಡುಗಡೆ ಮಾಡಿಲ್ಲ. ದಲಿತ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವುದಾಗಿ ಹೇಳಿದ್ದರು ಆದರೆ ಇದುವರೆಗೂ ಅದರ ಟೆಂಡರ್ ಪ್ರಕಿಯೆ ನಡೆದಿಲ್ಲ. ಸಿಎಂ ಸಿದ್ದರಾಮಯ್ಯನವರು ತಮ್ಮ 167 ಸಾಧನೆಯ ಗುರಿಯಲ್ಲಿ 150 ಅಂಶಗಳನ್ನು ಸಾಧಿಸಿರುವುದಾಗಿ ಹೇಳುತ್ತಾರೆ. ತಾವು ಸಾಧಿಸಿದ ವಿಷಯಗಳನ್ನು ಪಟ್ಟಿಮಾಡಿ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.
ಗುಜರಾತ್ ಹಾಗೂ ಹಿಮಾಚಲ್ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವನ್ನು ಪಡೆದಿದೆ. ಜನತೆಯ ತೀರ್ಮಾನವನ್ನು ಗೌರವಿಸಬೇಕಾದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣಾ ಫಲಿತಾಂಶದ ಬಗ್ಗೆ ಸಿಎಂ ಬಹಳ ಹಗುರವಾಗಿ ಮಾತನಾಡಿದ್ದಾರೆ. ಗುಜರಾತ್ ಹಾಗೂ ಹಿಮಾಚಲ್ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಸಂತೋಷ ತಂದಿದೆ. ಆದರೆ ಬಿಜೆಪಿಯನ್ನು ಟೀಕಿಸಲು ಸಿಎಂ ಸಿದ್ದರಾಮಯ್ಯನವರು ಹಗುರವಾದ ಪದಗಳನ್ನು ಬಳಸುತ್ತಿರುವುದು ಸಿಎಂ ಆಗಿ ಅವರ ಸ್ಥಾನಕ್ಕೆ ಗೌರವ ತರುವಂತಹುದಲ್ಲ ಎಂದರು.
ಸಿದ್ದರಾಮಯ್ಯ ಕೇವಲ ಟೀಕಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಆದರೆ ಕಳೆದ ನಾಲ್ಕು ಮುಕ್ಕಾಲು ವರ್ಷದಲ್ಲಿ ರಾಜ್ಯಕ್ಕಾಗಿ ಅವರು ನೀಡಿರುವ ಕೊಡುಗೆಗಳಾದರೂ ಏನು ಎಂಬುದನ್ನು ಅವರು ಸ್ಪಷ್ಟಪಡಿಸಲಿ. ತಮ್ಮ ಚುನಾವಣಾ ಪ್ರನಾಳಿಕೆಯಲ್ಲಿನ 150 ಭರವಸೆಗಳನ್ನು ಈಗಾಗಲೇ ಈಡೇರಿಸಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ನೀರಾವರಿಯಲ್ಲಿ 22 ಸಾವಿರ ಲಕ್ಷ ಎಕರೆ ಸಾಧನೆ ಮಾಡುವುದಾಗಿ ತಿಳಿಸಿದ್ದ ಅವರು ಸಾಧಿಸಿದ್ದು ಮಾತ್ರ ಕೇವಲ 6 ಲಕ್ಷ ಎಕರೆ ಮಾತ್ರ ಎಂದು ಲೇವಡಿ ಮಾಡಿದರು.







