ಹೆಚ್ಚುವರಿ ಶುಲ್ಕ ಪಡೆಯುವ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕ್ರಮ: ತನ್ವೀರ್ ಸೇಠ್

ಬೆಂಗಳೂರು, ಡಿ.20: ಖಾಸಗಿ ಶಾಲೆಗಳು ಅನಿಯಮಿತವಾಗಿ ಶುಲ್ಕ ವಸೂಲಿ ಮಾಡುವುದಕ್ಕೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನ ಬಂದಂತೆ ಶುಲ್ಕ ನಿಗದಿ ಮಾಡುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ನಿಯಮಾವಳಿ ರೂಪಿಸಿ 2018-19ನೆ ಸಾಲಿನಿಂದಲೇ ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು.
ಸರಕಾರದ ನಿಯಮಾವಳಿ ಆಧರಿಸಿಯೇ ಖಾಸಗಿ ಶಾಲೆಗಳು ಶುಲ್ಕ ನಿಗದಿ ಮಾಡಬೇಕು. ತರಗತಿವಾರು ಶುಲ್ಕದ ವಿವರವನ್ನು ಶಾಲೆಗಳ ಸೂಚನಾ ಫಲಕದಲ್ಲಿ ಪ್ರಕಟಿಸುವುದು ಕಡ್ಡಾಯ. ಪ್ರಕಟಿಸದ ಶಾಲೆಗಳ ವಿರುದ್ಧ ದೂರು ನೀಡಲು ಪೋಷಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಪ್ರಸಕ್ತ ಸಾಲಿನ ತರಗತಿಗಳು ಮುಗಿದ ಬಳಿಕ ಮುಂದಿನ ವರ್ಷದ ಪ್ರವೇಶಾತಿ ಆರಂಭಿಸಬೇಕು. ಆದರೆ, ಕೆಲವು ಶಾಲೆಗಳು ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭಿಸಿರುವುದು ನನ್ನ ಗಮನಕ್ಕೆ ಬಂದಿದೆ. ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಶಿಕ್ಷಕರಿಗೆ ಭಡ್ತಿ ಭಾಗ್ಯ
ಪ್ರಾಥಮಿಕ ಶಾಲೆಯ 18,200 ಶಿಕ್ಷಕರು ಪದವಿ ಪಡೆದಿದ್ದು, ಭಡ್ತಿಗೆ ಅರ್ಹರಿದ್ದಾರೆ. ಹಿರಿಯ ಪ್ರಾಥಮಿಕ ಶಾಲೆಗಳಲ್ಲೂ 11,000 ಶಿಕ್ಷಕರು ಪ್ರೌಢಶಾಲೆ ಶಿಕ್ಷಕರಾಗಲು, ಪ್ರೌಢಶಾಲೆಗಳಲ್ಲಿ 361 ಶಿಕ್ಷಕರು ಮುಖ್ಯ ಶಿಕ್ಷಕರಾಗಲು ಅರ್ಹರಿದ್ದಾರೆ. ಜೇಷ್ಠತೆ ಆಧರಿಸಿ ಭಡ್ತಿ ನೀಡಲಾಗುವುದು.
-ತನ್ವೀರ್ ಸೇಠ್ ಸಚಿವ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ







