ಮೊದಲ ಟ್ವೆಂಟಿ-20: ಶ್ರೀಲಂಕಾ ಗೆಲುವಿಗೆ 181 ರನ್ ಗುರಿ
ರಾಹುಲ್ ಅರ್ಧಶತಕ, ಧೋನಿ ಅಜೇಯ 39

ಕಟಕ್, ಡಿ.20: ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ತಂಡದ ಗೆಲುವಿಗೆ 181 ರನ್ ಗುರಿ ನೀಡಿದೆ.
ಬಾರಬತಿ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ನಾಯಕ ತಿಸಾರ ಪೆರೇರ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.
ಆರಂಭಿಕ ಆಟಗಾರ ಕೆ.ಎಲ್. ರಾಹುಲ್(61), ಮಾಜಿ ನಾಯಕ ಧೋನಿ(ಅಜೇಯ 39) ಹಾಗೂ ಮನೀಶ್ ಪಾಂಡೆ(ಅಜೇಯ 32) ನೆರವನಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 180 ರನ್ ಗಳಿಸಿತು.
ಇನಿಂಗ್ಸ್ ಆರಂಭಿಸಿದ ಹಂಗಾಮಿ ನಾಯಕ ರೋಹಿತ್ ಶರ್ಮ ಹಾಗೂ ರಾಹುಲ್ ಮೊದಲ ವಿಕೆಟ್‌ಗೆ 38 ರನ್ ಸೇರಿಸಿ ಸಾಧಾರಣ ಆರಂಭ ನೀಡಿದರು.
ಈ ಜೋಡಿ ಬೇರ್ಪಟ್ಟ ಬಳಿಕ ಶ್ರೇಯಸ್ ಅಯ್ಯರ್(24) ರಾಹುಲ್‌ಗೆ ಜೊತೆಯಾದರು. ಈ ಇಬ್ಬರು 2ನೇ ವಿಕೆಟ್‌ಗೆ 62 ರನ್ ಸೇರಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಅಯ್ಯರ್‌ಗೆ ಪ್ರದೀಪ್ ಪೆವಿಲಿಯನ್ ಹಾದಿ ತೋರಿಸಿದರು. ರಾಹುಲ್ 48 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ಗಳಿರುವ 61 ರನ್ ಗಳಿಸಿ ಪೆರೇರಗೆ ವಿಕೆಟ್ ಒಪ್ಪಿಸಿದರು.
4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 68 ರನ್ ಸೇರಿಸಿದ ಧೋನಿ(ಅಜೇಯ 39, 22 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಮನೀಶ್ ಪಾಂಡೆ(ಅಜೇಯ 32, 18 ಎಸೆತ, 2 ಬೌಂಡರಿ, 2 ಸಿಕ್ಸರ್) ಶ್ರೀಲಂಕಾ ಗೆಲುವಿಗೆ 181 ರನ್ ಗುರಿ ನಿಗದಿಪಡಿಸಿದರು.
ಭಾರತ ತಂಡ ಶಿಖರ್ ಧವನ್‌ಗೆ ವಿಶ್ರಾಂತಿ ನೀಡಿ ಕೆ.ಎಲ್. ರಾಹುಲ್‌ಗೆ ಅವಕಾಶ ನೀಡಿದೆ. ಭುವನೇಶ್ವರ ಕುಮಾರ್ ಬದಲಿಗೆ ಜೈದೇವ್ ಉನದ್ಕಟ್ ಆಡುವ 11ರ ಬಳಗ ಸೇರಿಕೊಂಡಿದ್ದಾರೆ.
ಶ್ರೀಲಂಕಾ ತಂಡದಲ್ಲಿ ವೇಗಿ ವಿಶ್ವ ಫೆರ್ನಾಂಡೊ ಚೊಚ್ಚಲ ಪಂದ್ಯ ಆಡಲಿದ್ದು, ದುಶ್ಮಂತ್ ಚಾಮೀರ ಹಾಗೂ ಶನಕ ತಂಡದ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.







