ಡಿ. 21: ವಿಶ್ವಸಂಸ್ಥೆಯ ಮಹಾಧಿವೇಶನದ ತುರ್ತು ಅಧಿವೇಶನ
ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ ಘೋಷಣೆ ಬಗ್ಗೆ ಚರ್ಚೆ

ವಿಶ್ವಸಂಸ್ಥೆ, ಡಿ. 20: ಜೆರುಸಲೇಂನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯ ಮಾಡಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಚರ್ಚಿಸಲು ಅರಬ್ ಮತ್ತು ಮುಸ್ಲಿಮ್ ದೇಶಗಳ ಬೇಡಿಕೆಯ ಮೇರೆಗೆ ವಿಶ್ವಸಂಸ್ಥೆಯ ಮಹಾಧಿವೇಶನವು ಗುರುವಾರ ತುರ್ತು ವಿಶೇಷ ಅಧಿವೇಶನ ನಡೆಸಲಿದೆ.
193 ಸದಸ್ಯರ ವಿಶ್ವಸಂಸ್ಥೆಯ ಮಹಾಧಿವೇಶನವು ಇಂಥ ತುರ್ತು ಅಧಿವೇಶನವನ್ನು ನಡೆಸುವುದು ಅತ್ಯಂತ ಅಪರೂಪವಾಗಿದೆ.
ಟ್ರಂಪ್ ತನ್ನ ಘೋಷಣೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಕರೆ ನೀಡುವ ಕರಡು ನಿರ್ಣಯದ ಮೇಲೆ ಮಹಾಧಿವೇಶನವು ಮತದಾನ ಮಾಡುವುದು ಎಂದು ವಿಶ್ವಸಂಸ್ಥೆಗೆ ಫೆಲೆಸ್ತೀನ್ ರಾಯಭಾರಿ ರಿಯಾದ್ ಮನ್ಸೂರ್ ತಿಳಿಸಿದರು.
ಇದಕ್ಕೂ ಮೊದಲು, ಸೋಮವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅನುಮೋದಿಸಿದ ಇದೇ ನಿರ್ಣಯಕ್ಕೆ ಅಮೆರಿಕ ವೀಟೊ ಚಲಾಯಿಸಿರುವುದನ್ನು ಸ್ಮರಿಸಬಹುದಾಗಿದೆ.
ಭದ್ರತಾ ಮಂಡಳಿಯಲ್ಲಿ ಈಜಿಪ್ಟ್ ಮಂಡಿಸಿದ ನಿರ್ಣಯದ ಪರವಾಗಿ ಒಟ್ಟು 15 ಸದಸ್ಯರ ಪೈಕಿ 14 ಸದಸ್ಯ ದೇಶಗಳು ಮತ ಹಾಕಿದವು. ಆದರೆ, ಅದಕ್ಕೆ ಅಮೆರಿಕ ವೀಟೊ ಚಲಾಯಿಸಿ ನಿರ್ಣಯ ಅಂಗೀಕಾರಗೊಳ್ಳದಂತೆ ನೋಡಿಕೊಂಡಿತು.
ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ನಿರ್ಣಯದ ಪರವಾಗಿ ಭಾರಿ ಬೆಂಬಲವನ್ನು ನಿರೀಕ್ಷಿಸಿರುವುದಾಗಿ ಮನ್ಸೂರ್ ಹೇಳಿದರು.
ನಿರ್ಣಯ ಅಂಗೀಕಾರಗೊಂಡರೂ ಅದು ಜಾರಿಯಾಗುವುದಿಲ್ಲ. ಆದರೆ, ಅದಕ್ಕೆ ರಾಜಕೀಯ ಮಹತ್ವವಿರುತ್ತದೆ.







