ವಿಶ್ವಸಂಸ್ಥೆಯ ಮಾನವಹಕ್ಕುಗಳ ತನಿಖಾಧಿಕಾರಿಗೆ ಮ್ಯಾನ್ಮಾರ್ ನಿಷೇಧ

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಡಿ. 20: ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಮಾನವಹಕ್ಕು ಉಲ್ಲಂಘನೆಗಳ ಬಗ್ಗೆ ತನಿಖೆ ನಡೆಸಲು ನಿಯೋಜಿತರಾಗಿರುವ ವಿಶ್ವಸಂಸ್ಥೆಯ ಸ್ವತಂತ್ರ ತನಿಖಾಧಿಕಾರಿ ಯಾಂಗೀ ಲೀ ಅವರಿಗೆ ದೇಶ ಪ್ರವೇಶಿಸಲು ಮ್ಯಾನ್ಮಾರ್ ಸರಕಾರ ಅವಕಾಶ ನಿರಾಕರಿಸಿದೆ.
ತಮಗೆ ಸಹಕಾರವನ್ನೂ ನೀಡಲಾಗುವುದಿಲ್ಲ ಹಾಗೂ ತಮ್ಮ ಉಳಿಕೆ ಅವಧಿಯಲ್ಲಿ ಮ್ಯಾನ್ಮಾರ್ ಪ್ರವೇಶಿಸಲು ಅನುಮತಿಯನ್ನೂ ನೀಡಲಾಗುವುದಿಲ್ಲ ಎಂದು ಮ್ಯಾನ್ಮಾರ್ ತಿಳಿಸಿದೆ ಎಂದು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ರಖೈನ್ ರಾಜ್ಯದಲ್ಲಿ ರೊಹಿಂಗ್ಯಾ ಮುಸ್ಲಿಮರ ಮೇಲೆ ನಡೆದ ದೌರ್ಜನ್ಯಗಳೂ ಸೇರಿದಂತೆ ಮ್ಯಾನ್ಮಾರ್‌ನಾದ್ಯಂತದ ಮಾನವಹಕ್ಕು ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಲು ತಾನು ಜನವರಿಯಲ್ಲಿ ಆ ದೇಶಕ್ಕೆ ಭೇಟಿ ನೀಡಬೇಕಾಗಿತ್ತು ಎಂದು ಯಾಂಗೀ ಲೀ ಹೇಳಿದರು.
‘‘ನನಗೆ ನೀಡಲಾಗಿರುವ ಅನುಮತಿ ನಿರಾಕರಣೆಯನ್ನು, ರಖೈನ್‌ನಲ್ಲಿ ಹಾಗೂ ದೇಶದ ಉಳಿದ ಭಾಗದಲ್ಲಿ ಭಯಾನಕ ಸಂಗತಿಗಳು ನಡೆದಿರುವುದಕ್ಕೆ ಪ್ರಬಲ ಪುರಾವೆಯಾಗಿ ಪರಿಗಣಿಸಬಹುದಾಗಿದೆ’’ ಎಂದು ಅವರು ಹೇಳಿದ್ದಾರೆ.





