ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರಗೈದು ಕೊಲೆ ಮಾಡಿದವರ ಮೇಲೆ ಕಠಿಣ ಕ್ರಮಕ್ಕೆ ಎಸ್‍ಡಿಪಿಐ ಆಗ್ರಹ
ಮಡಿಕೇರಿ, ಡಿ. 20: ಬಿಜಾಪುರದ ವಿಜಯಪುರದಲ್ಲಿ ದಲಿತ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವನ್ನು ಎಸಗಿ, ಕೊಲೆ ಮಾಡಿರುವ ಅತ್ಯಂತ ನೀಚ ಘಟನೆಯನ್ನು ಹಾಗೂ ಕೊಡಗು ಜಿಲ್ಲೆಯ ವಾಟ್ಸಪ್ ಗ್ರೂಪೊಂದರಲ್ಲಿ ಅಂಬೇಡ್ಕರ್ ಬಗ್ಗೆ ಅವಹೇಳನಾಕಾರಿ ಸಂದೇಶ ಕಳಿಸಿರುವ ಘಟನೆಯನ್ನು ಎಸ್‍ಡಿಪಿಐ ಜಿಲ್ಲಾ ಸಮಿತಿ ತೀವೃವಾಗಿ ಖಂಡಿಸುತ್ತದೆ.
ಇಲ್ಲಿನ ಶಾಲೆಯೊಂದರ ಒಂಬತ್ತನೇ ತರಗತಿ ವಿದ್ಯಾರ್ಥಿನಿಯನ್ನು ಊಟದ ಬಿಡುವಿನ ಸಮಯದಲ್ಲಿ ಯುವಕನೊಬ್ಬ ಕರೆದೊಯ್ದಿದನ್ನು ಸ್ಥಳೀಯರು ನೋಡಿದ್ದಾರೆ. ಕೆಲ ಹೊತ್ತಿನ ಬಳಿಕ ಆಕೆ ಪ್ರಜ್ಞಾಹೀನಳಾಗಿದ್ದಳು. ಚಿಕಿತ್ಸೆಗಾಗಿ ನಗರದ ಸಾಯಿ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾಳೆ.
ಈ ಘಟನೆಯಿಂದಾಗಿ ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ. ದಿನದಿಂದ ದಿನಕ್ಕೆ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು, ಹಲ್ಲೆಗಳು ಮಿತಿಮೀರುತ್ತಿದೆ. ಘಟನೆಗೆ ಕಾರಣಾರಾದವರು ಎಷ್ಟೇ ಪ್ರಭಾವಿತರಾದರೂ ಅವರ ಮೇಲೆ ಕಠಿಣ ಕಾನೂನು ಕ್ರಮಕೈಗೊಂಡು ನೊಂದ ಕುಟುಂಬಕ್ಕೆ ನ್ಯಾಯಕೊಡಿಸಬೇಕಾಗಿ ಹಾಗೂ ವಾಟ್ಸಪ್ ಗ್ರೂಪಿನಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಾಕಾರಿ ಹಾಗೂ ಅವಾಚ್ಯ ಶಬ್ಧಗಳನ್ನು ಬಳಸಿ ಸಂದೇಶ ಕಳಿಸಿರುವ ವ್ಯಕ್ತಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಆಗ್ರಹಿಸಿದ್ದಾರೆ.







