ರಸ್ತೆ ಅಪಘಾತ: ಗಾಯಾಳು ಮೃತ್ಯು
ಮಂಗಳೂರು, ಡಿ. 20: ನಗರದ ಬಿಜೈ ಕಾಪಿಕಾಡು ರಸ್ತೆಯಲ್ಲಿ ಮಂಗಳವಾರ ನಡೆದ ಆಟೋ ರಿಕ್ಷಾ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಬುಧವಾರ ನಸುಕಿನ ಜಾವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಿಜೈ ಕಾಪಿಕಾಡ್ ನಿವಾಸಿ ಶ್ರೀನಿವಾಸ ಶೆಣೈ ಅವರು ಕೆಎಸ್ಸಾರ್ಟಿಸಿ ಕಡೆಗೆ ಹೋಗಿ ಹಿಂತಿರುಗುತ್ತಿದ್ದರು. ಈ ಸಂದರ್ಭ ಸ್ನೇಹಿತ ರವಿ ದಾರಿ ಮಧ್ಯೆ ಸಿಕ್ಕಿದ್ದು ಇಬ್ಬರೂ ಜತೆಯಾಗಿ ಆಟೋ ರಿಕ್ಷಾವೊಂದರಲ್ಲಿ ಬಿಜೈ ಕಾಪಿಕಾಡು ರಸ್ತೆಯಲ್ಲಿ ತೆರಳಿದ್ದರು. ರವಿ ಅವರನ್ನು ಮನೆಗೆ ಬಿಟ್ಟು ಶ್ರೀನಿವಾಸ ಶೆಣೈ ಇಳಿಜಾರು ರಸ್ತೆಯಲ್ಲಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಆಟೋ ರಿಕ್ಷಾ ಡಿವೈಡರ್‌ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಪರಿಣಾಮ ರಿಕ್ಷಾದಲ್ಲಿದ್ದ ಶ್ರೀನಿವಾಸ ಶೆಣೈ ಅವರ ಸೊಂಟ ಮತ್ತು ಕೈ ಕಾಲುಗಳಿಗೆ ಗುದ್ದಿದ ಹಾಗೂ ತರಚಿದ ಗಾಯಗಳಾಗಿದ್ದವು. ಮನೆಯಲ್ಲಿದ್ದ ಶ್ರೀನಿವಾಸರಿಗೆ ರಾತ್ರಿ 11:30ರ ವೇಳೆಗೆ ತೀವ್ರ ತರದ ನೋವು ಕಾಣಿಸಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಡಿ. 20ರಂದು ಬೆಳಗ್ಗೆ 3:30ರ ವೇಳೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಸಂಚಾರಿ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





