ಮೊದಲ ಟ್ವೆಂಟಿ-20: ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ರಾಹುಲ್ ಅರ್ಧಶತಕ,ಚಹಾಲ್-ಯಾದವ್ ಸ್ಪಿನ್ ಜಾದೂ

ಕಟಕ್, ಡಿ.20: ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ತಂಡವನ್ನು 93 ರನ್‌ಗಳಿಂದ ಮಣಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಬುಧವಾರ ಬಾರಬತಿ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ನಾಯಕ ತಿಸಾರ ಪೆರೇರ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.
ಆರಂಭಿಕ ಆಟಗಾರ ಕೆಎಲ್ ರಾಹುಲ್(61), ಮಾಜಿ ನಾಯಕ ಎಂಎಸ್ ಧೋನಿ(ಅಜೇಯ 39) ಹಾಗೂ ಮನೀಶ್ ಪಾಂಡೆ(ಅಜೇಯ 32) ನೆರವಿನಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 180 ರನ್ ಗಳಿಸಿತು.
ಗೆಲ್ಲಲು ಕಠಿಣ ಸವಾಲು ಪಡೆದ ಶ್ರೀಲಂಕಾ 16 ಓವರ್‌ಗಳಲ್ಲಿ 87 ರನ್ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಸ್ಪಿನ್ನರ್ ಗಳಾದ ಯಜುವೇಂದ್ರ ಚಹಾಲ್(4-23) ಹಾಗೂ ಕುಲ್‌ದೀಪ್ ಯಾದವ್(2-16) ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(3-29) ಲಂಕಾ ದಾಂಡಿಗರನ್ನು ಕಾಡಿದರು.
ಲಂಕೆಯ ಪರ ಉಪುಲ್ ತರಂಗ(19) ಸರ್ವಾಧಿಕ ರನ್ ಗಳಿಸಿದರು. ಕುಶಾಲ್ ಪೆರೇರ(19), ನಿರೊಶನ್ ಡಿಕ್ವೆಲ್ಲಾ(13) ಹಾಗೂ ಚಾಮೀರ(12) ಎರಡಂಕೆಯ ಸ್ಕೋರ್ ದಾಖಲಿಸಿದರು. ಆ್ಯಂಜೆಲೊ ಮ್ಯಾಥ್ಯೂಸ್(1), ನಾಯಕ ತಿಸಾರ ಪೆರೇರ(3)ಒಂದಂಕಿ ಸ್ಕೋರ್ ಗಳಿಸಿ ಭಾರೀ ನಿರಾಸೆಗೊಳಿಸಿದರು.
ಇದಕ್ಕೆ ಮೊದಲು ಭಾರತದ ಇನಿಂಗ್ಸ್ ಆರಂಭಿಸಿದ ಹಂಗಾಮಿ ನಾಯಕ ರೋಹಿತ್ ಶರ್ಮ ಹಾಗೂ ರಾಹುಲ್ ಮೊದಲ ವಿಕೆಟ್‌ಗೆ 38 ರನ್ ಸೇರಿಸಿ ಸಾಧಾರಣ ಆರಂಭ ನೀಡಿದರು.
ಈ ಜೋಡಿ ಬೇರ್ಪಟ್ಟ ಬಳಿಕ ಶ್ರೇಯಸ್ ಅಯ್ಯರ್(24) ರಾಹುಲ್‌ಗೆ ಜೊತೆಯಾದರು. ಈ ಇಬ್ಬರು 2ನೇ ವಿಕೆಟ್‌ಗೆ 62 ರನ್ ಸೇರಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಅಯ್ಯರ್ ಹಾಗೂ ರಾಹುಲ್ ಬೆನ್ನುಬೆನ್ನಿಗೆ ಔಟಾದರು. ಅಯ್ಯರ್‌ಗೆ ಪ್ರದೀಪ್ ಪೆವಿಲಿಯನ್ ಹಾದಿ ತೋರಿಸಿದರು. ರಾಹುಲ್ 48 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ಗಳಿರುವ 61 ರನ್ ಗಳಿಸಿ ಪೆರೇರಗೆ ವಿಕೆಟ್ ಒಪ್ಪಿಸಿದರು.
4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 68 ರನ್ ಸೇರಿಸಿದ ಧೋನಿ(ಅಜೇಯ 39, 22 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಮನೀಶ್ ಪಾಂಡೆ(ಅಜೇಯ 32, 18 ಎಸೆತ, 2 ಬೌಂಡರಿ, 2 ಸಿಕ್ಸರ್) ಶ್ರೀಲಂಕಾ ಗೆಲುವಿಗೆ 181 ರನ್ ಗುರಿ ನಿಗದಿಪಡಿಸಿದರು.
ಧೋನಿ-ಮನೀಶ್ ಜೋಡಿ ಕೊನೆಯ 5 ಓವರ್‌ಗಳಲ್ಲಿ 65 ರನ್ ಕಲೆ ಹಾಕಿತು. ಧೋನಿ ಅವರು ಪೆರೇರ ಅವರ ಇನಿಂಗ್ಸ್‌ನ ಅಂತಿಮ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ತಂಡ ಉತ್ತಮ ಸ್ಕೋರ್ ಗಳಿಸಲು ನೆರವಾದರು. ಭಾರತ ತಂಡ ಶಿಖರ್ ಧವನ್‌ಗೆ ವಿಶ್ರಾಂತಿ ನೀಡಿ ಕೆ.ಎಲ್. ರಾಹುಲ್‌ಗೆ ಅವಕಾಶ ನೀಡಿದೆ. ಭುವನೇಶ್ವರ ಕುಮಾರ್ ಬದಲಿಗೆ ಜೈದೇವ್ ಉನದ್ಕಟ್ ಆಡುವ 11ರ ಬಳಗ ಸೇರಿಕೊಂಡಿದ್ದಾರೆ.
ಶ್ರೀಲಂಕಾ ತಂಡದಲ್ಲಿ ವೇಗಿ ವಿಶ್ವ ಫೆರ್ನಾಂಡೊ ಚೊಚ್ಚಲ ಪಂದ್ಯ ಆಡಲಿದ್ದು, ದುಶ್ಮಂತ್ ಚಾಮೀರ ಹಾಗೂ ಶನಕ ತಂಡದ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.







