ಪದ್ಮಾವತಿ ವಿವಾದ: ಇತಿಹಾಸ ತಜ್ಞರ ಸಮಿತಿ ರಚಿಸಲಿರುವ ಸೆನ್ಸಾರ್ ಮಂಡಳಿ

ಹೊಸದಿಲ್ಲಿ, ಡಿ.21: ವಿವಾದಾತ್ಮಕ ಸಿನಿಮಾ ಪದ್ಮಾವತಿಯ ತಯಾರಕರು ಇದು ಭಾಗಶಃ ಐತಿಹಾಸಿಕ ಅಂಶಗಳನ್ನು ಆಧರಿಸಿ ನಿರ್ಮಿಸಲಾದ ಚಿತ್ರವಾಗಿದೆ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಈ ಚಿತ್ರವನ್ನು ವೀಕ್ಷಿಸಲು ಇತಿಹಾಸತಜ್ಞರ ಸಮಿತಿಯನ್ನು ರಚಿಸಲು ಕೇಂದ್ರ ಸಿನಿಮಾ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಚಿಂತನೆ ನಡೆಸಿದೆ.
ಇದರಿಂದಾಗಿ ಗುಜರಾತ್ ಚುನಾವಣೆ ಮುಗಿದಿರುವ ಕಾರಣ ಸೆನ್ಸಾರ್ ಮಂಡಳಿಯಿಂದ ಶೀಘ್ರ ಪ್ರಮಾಣಪತ್ರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಪದ್ಮಾವತಿ ತಂಡಕ್ಕೆ ತೀವ್ರ ನಿರಾಶೆಯಾಗಿದೆ. ಸೆನ್ಸಾರ್ ಮಂಡಳಿ ಮೂಲಗಳ ಪ್ರಕಾರ, ಪದ್ಮಾವತಿ ಚಿತ್ರದ ತಯಾರಕರು ಪ್ರಮಾಣೀಕರಣಕ್ಕಾಗಿ ಸಲ್ಲಿಸಿದ್ದ ಅರ್ಜಿಯಲ್ಲಿ ಈ ಸಿನಿಮಾವು ಭಾಗಶಃ ಐತಿಹಾಸಿಕ ಅಂಶಗಳನ್ನು ಆಧರಿಸಿದೆ ಎಂದು ಅಸ್ಪಷ್ಟ ಹೇಳಿಕೆ ನೀಡುವ ಮೂಲಕ ಅನಗತ್ಯವಾಗಿ ಪ್ರಕರಣವನ್ನು ಸಂಕೀರ್ಣಗೊಳಿಸಿದ್ದಾರೆ. ಹಾಗಾಗಿ ಆ ಸಿನಿಮಾದಲ್ಲಿರುವ ವಿಷಯವನ್ನು ದೃಢೀಕರಿಸುವ ಅಗತ್ಯವಿದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಪದ್ಮಾವತಿ ಸಿನಿಮಾ ತಯಾರಕರು ಸೆನ್ಸಾರ್ ಮಂಡಳಿಗೆ ಕಳುಹಿಸಿದ್ದ ಅರ್ಜಿಯಲ್ಲಿ ಈ ಸಿನಿಮಾ ಇತಿಹಾಸ ಆಧರಿತವೇ ಅಥವಾ ಕಾಲ್ಪನಿಕವೇ ಎಂದು ತಿಳಿಸಬೇಕಿದ್ದ ಜಾಗವನ್ನು ಖಾಲಿ ಬಿಟ್ಟಿದ್ದ ಕಾರಣ ಈ ಚಿತ್ರವನ್ನು ದರ ತಯಾರಕರಿಗೆ ವಾಪಸ್ ಕಳುಹಿಸಲಾಗಿತ್ತು.
ಪದ್ಮಾವತಿ ಸಿನಿಮಾದಲ್ಲಿ ರಜಪೂತ ಪ್ರತಿಷ್ಠೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ರಜಪೂತ ಕರ್ಣಿಸೇನಾ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕೆಲವು ರಾಜಕಾರಣಿಗಳು ಕೂಡಾ ಚಿತ್ರದ ವಿರುದ್ಧ ಧ್ವನಿ ಎತ್ತಿ ಈ ಸಿನಿಮಾವನ್ನು ರಾಜಸ್ಥಾನದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು.
ಡಿಸೆಂಬರ್ ತಿಂಗಳು ಬಹುತೇಕ ಕೊನೆಯಾಗಿರುವ ಕಾರಣ ಜನವರಿಯಲ್ಲಿ ಪದ್ಮಾವತಿ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಸೆನ್ಸಾರ್ ಮಂಡಳಿ ತಿಳಿಸಿದೆ. ಪದ್ಮಾವತಿಗೂ ಮುನ್ನ ವಿವಿಧ ಭಾಷೆಗಳ ಕನಿಷ್ಟ 40 ಸಿನಿಮಾಗಳು ಸೆನ್ಸಾರ್ ಗಾಗಿ ಸರತಿಯಲ್ಲಿ ಕಾಯುತ್ತಿದ್ದು ಅವುಗಳಿಗೆ ಪ್ರಮಾಣಪತ್ರ ನೀಡಿದ ನಂತರವೇ ಪದ್ಮಾವತಿಯನ್ನು ಪ್ರಮಾಣೀಕರಿಸಲಾಗುವುದು ಎಂದು ಮಂಡಳಿಯ ಮೂಲಗಳು ತಿಳಿಸಿವೆ.







