ಉತ್ತರ ಪ್ರದೇಶ: ನಾಲ್ವರು ಮಹಾಂತರಿಂದ ಸಾಧ್ವಿಗಳ ಮೇಲೆ ನಿರಂತರ ಅತ್ಯಾಚಾರ: ಆರೋಪ

ಲಕ್ನೊ, ಡಿ.21: ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿರುವ ಪ್ರಸಿದ್ಧ ಆಶ್ರಮದ ನಾಲ್ವರು ಮಹಾಂತರು ತಮ್ಮ ಮೇಲೆ ಹಲವು ವರ್ಷಗಳಿಂದ ನಿರಂತರ ಹಲ್ಲೆ ಮತ್ತು ಅತ್ಯಾಚಾರ ನಡೆಸುತ್ತಾ ಬಂದಿರುವುದಾಗಿ ನಾಲ್ವರು ಸಾಧ್ವಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಸ್ತಿ ಜಿಲ್ಲೆಯ ಸಂತ ಕುಠೀರ ಆಶ್ರಮದ ನಾಲ್ಕು ಮಹಾಂತರು (ಬಾಬಾಗಳು) ನಮ್ಮನ್ನು ಹಲವು ವರ್ಷಗಳಿಂದ ಒತ್ತೆಯಾಳುಗಳನ್ನಾಗಿರಿಸಿದ್ದು ನಿರಂತರ ಹಲ್ಲೆ ಮತ್ತು ಅತ್ಯಾಚಾರ ನಡೆಸಿರುವುದಾಗಿ ಸಾಧ್ವಿಗಳು ದೂರಿನಲ್ಲಿ ಆರೋಪಿಸಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಸಾಧ್ವಿಗಳ ಪೈಕಿ ಇಬ್ಬರು ಛತ್ತೀಸ್‌ಘಡ್ ರಾಜ್ಯದವರಾಗಿದ್ದು, ದೇಶದ ನಾನಾ ಕಡೆಗಳಲ್ಲಿ ಹಲವು ಆಶ್ರಮಗಳನ್ನು ಹೊಂದಿರುವ ಆರೋಪಿ ಮಹಾಂತರು ಕೆಲವು ಸಾಧ್ವಿಗಳ ನೆರವಿನಿಂದ ಯುವತಿಯರನ್ನು ತಮ್ಮತ್ತ ಸೆಳೆದು ಅವರನ್ನು ದೈಹಿಕವಾಗಿ ಶೋಷಣೆಗೆ ಒಳಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇವರ ಕೃತ್ಯಕ್ಕೆ ವಿರೋಧ ವ್ಯಕ್ತಪಡಿಸುವ ಯುವತಿಯರನ್ನು ಒತ್ತೆಯಾಳುಗಳನ್ನಾಗಿರಿಸಿ ದೈಹಿಕ ಹಲ್ಲೆ ನಡೆಸಲಾಗುತ್ತದೆ ಎಂದವರು ದೂರಿದ್ದಾರೆ.
ಆಶ್ರಮದ ಎರಡನೇ ಮಹಡಿಯಲ್ಲಿದ್ದ ಕಿಟಕಿಯ ಮೂಲಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ನಂತರ ಜಿಲ್ಲಾಧಿಕಾರಿಗಳ ಬಳಿಗೆ ತೆರಳಿ ತಮ್ಮ ಸಂಕಷ್ಟವನ್ನು ವಿವರಿಸಿರುವುದಾಗಿ ಸಂತ್ರಸ್ತರ ಸಾಧ್ವಿಗಳು ತಿಳಿಸಿದ್ದಾರೆ. ಆಶ್ರಮದಲ್ಲಿರುವ ಬಹಳಷ್ಟು ಮಹಾಂತರು ಅಪರಾಧಿಗಳಾಗಿದ್ದು ಹಲವು ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕಾನೂನಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೆಲವು ಮಹಾಂತರು ತಮ್ಮ ಹೆಸರನ್ನೇ ಬದಲಿಸಿರುವುದಾಗಿ ಸಾಧ್ವಿಗಳು ಆರೋಪಿಸಿದ್ದಾರೆ.
ಆದರೆ ಸಾಧ್ವಿಗಳ ಈ ಆರೋಪವನ್ನು ತಳ್ಳಿಹಾಕಿರುವ ಆಶ್ರಮದ ಪ್ರತಿನಿಧಿಗಳು ಈ ನಾಲ್ವರು ಸಾಧ್ವಿಗಳು ಆಶ್ರಮದ ಹಣದಲ್ಲಿ ಅವ್ಯವಹಾರ ನಡೆಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಆಶ್ರಮದಿಂದ ಉಚ್ಛಾಟಿಸಲಾಗಿತ್ತು. ಹಾಗಾಗಿ ಅವರು ಈಗ ಈ ರೀತಿಯ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರಕರಣವನ್ನು ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಸದ್ಯ ಸಂತ್ರಸ್ತ ಸಾಧ್ವಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.







