ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಧರಣಿ
ದಲಿತ ವಿದ್ಯಾರ್ಥಿ ದಾನೇಶ್ವರಿ ಅತ್ಯಾಚಾರ, ಕೊಲೆ ಪ್ರಕರಣ

ಬೆಂಗಳೂರು, ಡಿ.21: ವಿಜಯಪುರದಲ್ಲಿ ದಲಿತ ವಿದ್ಯಾರ್ಥಿನಿ ದಾನೇಶ್ವರಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ದಲಿತ, ಪ್ರಗತಿಪರ ಹಾಗೂ ವಿದ್ಯಾರ್ಥಿ ಸಂಘಟನೆಗಳು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದವು.
ನಗರದ ಮೈಸೂರು ವೃತ್ತದಲ್ಲಿ ಎಸ್‌ಎಫ್‌ಐ, ಪುರಭವನದ ಮುಂಭಾಗ ದಲಿತ ಸಂಘರ್ಷ ಸಮಿತಿ, ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು, ದಲಿತ ವಿದ್ಯಾರ್ಥಿ ದಾನೇಶ್ವರಿ ಮೇಲೆ ಅತ್ಯಾಚಾರ ಎಸಗಿರುವ ಕೃತ್ಯವನ್ನು ಖಂಡಿಸಿ, ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ವೇಳೆ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಮಾತನಾಡಿ, ದಲಿತ ವಿದ್ಯಾರ್ಥಿನಿ ದಾನೇಶ್ವರಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಕುರಿತು ವೈದ್ಯಕೀಯ ವರದಿ ಬರುವುದಕ್ಕೂ ಮೊದಲೇ ವಿಜಯಪುರದ ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾರ್ಥಿ ದಾನೇಶ್ವರಿ ಮೇಲೆ ಅತ್ಯಾಚಾರ ನಡೆದಿಲ್ಲವೆಂದು ಹೇಳಿಕೆ ನೀಡಿರುವುದು ರಾಜಕೀಯ ಪ್ರೇರಿತವಾಗಿದೆ. ಹೀಗಾಗಿ ಅವರನ್ನು ಜಿಲ್ಲೆಯಿಂದ ಈ ಕೂಡಲೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪಿಗಳು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗೂ ಪ್ರಧಾನಿ ಮೋದಿಯ ಸ್ವಚ್ಛಭಾರತ ಅಭಿಯಾನದ ನೇತೃತ್ವ ವಹಿಸಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ತನಿಖೆಯನ್ನು ದಿಕ್ಕು ತಪ್ಪಿಸಲು ರಾಜಕೀಯ ಹಿತಾಸಕ್ತಿಗಳು ಒತ್ತಡ ಹಾಕುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ವಿಮೋಚನಾ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ಎಸ್.ಲಕ್ಷ್ಮೀ ಮಾತನಾಡಿ, ದಲಿತ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಬಲಿಯಾಗಿದ್ದಾರೆ ಎಂದು ನ್ಯಾಷನಲ್ ಕ್ರೈಮ್ ಬ್ಯೂರೋ ವರದಿ ನೀಡಿದೆ. ಇಲ್ಲಿನ ಜಾತಿ ವ್ಯವಸ್ಥೆಯಿಂದಾಗಿಯೇ ದಲಿತ ಮಹಿಳೆಯರು ಅತ್ಯಾಚಾರಕ್ಕೆ ತುತ್ತಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಎನ್‌ಎಸ್‌ಯುಐ ಪ್ರತಿಭಟನೆ: ದಲಿತ ವಿದ್ಯಾರ್ಥಿನಿ ದಾನೇಶ್ವರಿ ಮೇಲೆ ನಡೆದಿರುವ ಅತ್ಯಾಚಾರ ಹಾಗೂ ಕೊಲೆ ಇಡೀ ದೇಶವೇ ತಲೆ ತಗ್ಗಿಸುವಂತಹ ನಾಚಿಕೆಗೇಡಿನ ಸಂಗತಿಯಾಗಿದೆ. ಈ ಕೃತ್ಯ ಎಸಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮಹಿಳೆಯರಿಗೆ ನೈತಿಕ ಸ್ಥೈರ್ಯ ನೀಡಬೇಕು ಎಂದು ಒತ್ತಾಯಿಸಿ ಎಸ್‌ಎಸ್‌ಯುಐ ಕಾರ್ಯಕರ್ತರು ನಗರದ ಆನಂದ್ ರಾವ್ ವೃತ್ತದ ಬಳಿ ಪ್ರತಿಭಟನೆ ಮಾಡಿ ಸರಕಾರವನ್ನು ಒತ್ತಾಯಿಸಿದರು.
ಬೆಂವಿವಿ ವಿದ್ಯಾರ್ಥಿಗಳಿಂದ ಪ್ರತಿಭಟನೆ: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದಲಿತ ವಿದ್ಯಾರ್ಥಿನಿ ದಾನೇಶ್ವರಿ ಮೇಲೆ ಅತ್ಯಾಚಾರವನ್ನು ಖಂಡಿಸಿ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಎಷ್ಟು ದಿನಗಳ ವರೆಗೆ ದಲಿತ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಬಲಿಯಾಗಬೇಕು. ಪ್ರತಿಸಾರಿಯೂ ಅತ್ಯಾಚಾರ ಪ್ರಕರಣಗಳು ಸಂಭವಿಸಿದಾಗ ಕೇವಲ ಪ್ರತಿಭಟನೆ ನಡೆಯುತ್ತವೆಯೇ ಹೊರತು ಆರೋಪಿಗಳಿಗೆ ಶಿಕ್ಷೆ ಮಾತ್ರ ಆಗುವುದಿಲ್ಲ.
ಸರಕಾರ ಈ ಪ್ರಕರಣದಲ್ಲಿ ಆರೋಪಿಗಳಿಗೆ ಶೀಘ್ರವೇ ಕಠಿಣ ಶಿಕ್ಷೆ ವಿಧಿಸುವಂತೆ ನೋಡಿಕೊಳ್ಳಬೇಕು. ಪ್ರಕರಣದ ತನಿಖೆಗೆ ಅಗತ್ಯವಾದ ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಿಸಬೇಕು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ವಿಳಂಬವಾದರೆ, ತಪ್ಪಿದರೆ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿಯ ಸ್ವಯಂ ಪ್ರೇರಿತವಾಗಿ ಹೇಳಿಕೆ ನೀಡಿರುವುದು ಖಂಡನಾರ್ಹ ಹಾಗೂ ತನಿಖೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನವಾಗಿದೆ. ಪೂರ್ಣ ತನಿಖೆಯಾಗದ ಹೊರತು ಯಾವುದೇ ತೀರ್ಮಾನಕ್ಕೆ ಬರುವಂತಿಲ್ಲ ಎಂಬ ಕನಿಷ್ಟ ಜ್ಞಾನ ಪೊಲೀಸ್ ಅಧಿಕಾರಿಗೆ ಇಲ್ಲವೆ?
-ಶ್ರೀಪಾದ್‌ಭಟ್ ಶಿಕ್ಷಣ ತಜ್ಞ
ಹಕ್ಕೊತ್ತಾಯಗಳು
► ದಲಿತ ವಿದ್ಯಾರ್ಥಿ ದಾನೇಶ್ವರಿ ಮೇಲೆ ಅತ್ಯಾಚಾರ ಎಸಗಿದ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷಿ ವಿಧಿಸಬೇಕು.
► ನಗರದಲ್ಲಿ ಗಾಂಜಾ ಅಫೀಮು ಮಾರಾಟದ ಜಾಲವನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು.
► ಶಾಲಾ-ಕಾಲೇಜು ಮತ್ತು ಎಲ್ಲ ಕಚೇರಿಯಲ್ಲಿ ಲೈಂಗಿಕ ಕಿರುಕುಳ ತಡೆ ಸಮಿತಿ ರಚನೆ ಮತ್ತು ಪ್ರಚಾರಕ್ಕೆ ಆದ್ಯತೆ ನೀಡಬೇಕು.
► ವಿವಿಧ ಹಂತಗಳಲ್ಲಿ ಬಾಕಿ ಇರುವ ಅತ್ಯಾಚಾರ ದೌರ್ಜನ್ಯ ಪ್ರಕರಣಗಳ ಶೀಘ್ರ ತನಿಖೆ ಮತ್ತು ಆರೋಪ ಪಟ್ಟಿ ಸಲ್ಲಿಕೆಗೆ ಗಂಭೀರವಾದ ಆದೇಶ ನೀಡಬೇಕು.
► ನ್ಯಾ.ವರ್ಮಾ ಆಯೋಗದ ಶಿಫಾರಸುಗಳ ಜಾರಿಗೆ ಅಗತ್ಯವಾದ ಕ್ರಮ ಕೈಗೊಳ್ಳಬೇಕು.







