ಬೆಂಗಳೂರಿನಲ್ಲಿ ಜ.16 ರಿಂದ ಅಂತಾರಾಷ್ಟ್ರೀಯ ಕಾಫಿ ಉತ್ಸವ : ಪ್ರಿಯಾಂಕ್ ಖರ್ಗೆ

ಬೆಂಗಳೂರು, ಡಿ.21: ಅತ್ಯುತ್ತಮ ಕಾಫಿ ಬೆಳೆಯುವ ಜಗತ್ತಿನ ಮುಂಚೂಣಿ ರಾಜ್ಯಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ‘ಇಂಡಿಯಾ ಇಂಟರ್‌ನ್ಯಾಷನಲ್ ಕಾಫಿ ಫೆಸ್ಟಿವಲ್’(ಐಐಸಿಎಫ್) 7ನೇ ಆವೃತ್ತಿಯನ್ನು ಆಯೋಜಿಸುತ್ತಿರುವುದು ಸಂತಸದ ವಿಷಯ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕಾಫಿ ಬೋರ್ಡ್ ಸಹಯೋಗದಲ್ಲಿ ಮುಂದಿನ ಸಾಲಿನ ಜ.16 ರಿಂದ 19ರವರೆಗೆ ನಡೆಯಲಿರುವ ಇಂಡಿಯಾ ಇಂಟರ್‌ನ್ಯಾಷನಲ್ ಕಾಫಿ ಫೆಸ್ಟಿವಲ್‌ನ 7ನೆ ಆವೃತ್ತಿಯ ಪೂರ್ವಭಾವಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಮ್ಮೇಳನದ ಮೂಲಕ ರಾಜ್ಯದ ಕೊಡಗು, ಚಿಕ್ಕಮಗಳೂರು ಮತ್ತು ಸಕಲೇಶಪುರ ಪ್ರದೇಶಗಳನ್ನು ಕೇವಲ ಕಾಫಿ ಬೆಳೆಯುವ ಜಿಲ್ಲೆಗಳಾಗಿ ಗುರುತಿಸುವುದು ಮಾತ್ರವಲ್ಲದೆ, ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಅತ್ಯುತ್ತಮ ಪರಿಸರ, ಸುಂದರ ಭೌಗೋಳಿಕ ಸೊಬಗು ಹಾಗೂ ಪ್ರವಾಸಿಗರು ತಂಗಲು ಅಗತ್ಯವಿರುವ, ಅತ್ಯುತ್ತಮ ಸೌಲಭ್ಯಗಳನ್ನು ಒಳಗೊಂಡ ಹೋಮ್‌ಸ್ಟೇ, ಇಲ್ಲಿನ ಸಂಸ್ಕೃತಿ, ಸಂಪ್ರದಾಯಗಳನ್ನು ಅಡಕವಾಗಿಸಿಕೊಂಡಿರುವ ಈ ಎಲ್ಲ ಜಿಲ್ಲೆಗಳಿಗೆ ಪ್ರವಾಸೋದ್ಯಮ ದೃಷ್ಟಿಯಿಂದಲೂ ಪ್ರಚಾರ ನೀಡಲು ಐಐಸಿಎಫ್ ಅನ್ನು ಒಂದು ಸಮರ್ಪಕ ವೇದಿಕೆಯನ್ನಾಗಿ ಬಳಸಿಕೊಳ್ಳುವ ಉದ್ದೇಶವನ್ನು ಪ್ರವಾಸೋದ್ಯಮ ಇಲಾಖೆ ಹೊಂದಿದೆ ಎಂದು ಅವರು ತಿಳಿಸಿದರು.
ಈ ಕಾರಣಕ್ಕಾಗಿ ನಾವು ಕಾಫಿ ಮಾರ್ಗ(ಕಾಫಿ ಟ್ರೇಲ್) ಮತ್ತು ಹೋಮ್‌ಸ್ಟೇಗಳ ಮೂಲಕ ಅನುಭವಿಕ ಪ್ರವಾಸೋದ್ಯಮಕ್ಕೆ ಅಗತ್ಯವಿರುವ ಅಥವಾ ಪೂರಕವಾಗಿರುವ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಬದ್ಧರಾಗಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಕೇಂದ್ರ ಸರಕಾರದ ಕಾಫಿ ಬೋರ್ಡ್ ಆಫ್ ಇಂಡಿಯಾದ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ಮಾತನಾಡಿ, 2000ನೇ ಇಸವಿಯಲ್ಲಿ ಕಾಫಿ ಬೋರ್ಡ್‌ನ ಸಹಕಾರದೊಂದಿಗೆ ಕಾಫಿ ಉದ್ಯಮವು ಜಂಟಿಯಾಗಿ ಆರಂಭಿಸಿದ ಇಂಡಿಯಾ ಇಂಟರ್‌ನ್ಯಾಷನಲ್ ಕಾಫಿ ಫೆಸ್ಟಿವಲ್ ಕಾರ್ಯಕ್ರಮವು, ಇಂದು ಕಾಫಿ ಉದ್ಯಮಕ್ಕೆ ಅತೀ ಮುಖ್ಯ ಹಾಗೂ ಪ್ರಮುಖ ವೇದಿಕೆಯಾಗಿ ಬೆಳೆದು ನಿಂತಿದೆ ಎಂದರು.
ಭಾರತದಲ್ಲಿ ಕಾಫಿ ಸೇವನೆಯನ್ನು ಉತ್ತೇಜಿಸಲು ಕಾಫಿ ಬೋರ್ಡ್ ಆಫ್ ಇಂಡಿಯಾ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರೊಂದಿಗೆ, ಜಾಗತಿಕ ಕಾಫಿ ಖರೀದಿದಾರರಿಗೆ ‘ಕಾಫಿ ಆಫ್ ಇಂಡಿಯಾ’ವನ್ನು ಪ್ರದರ್ಶಿಸುವ ಕಾರ್ಯವನ್ನು ಐಐಸಿಎಫ್ ಮಾಡಲಿದೆ. ಕೇಂದ್ರ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಚಿವ ಸುರೇಶ್‌ಪ್ರಭು ಈ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು.
ಇಂಡಿಯಾ ಕಾಫಿ ಟ್ರಸ್ಟ್ ಅಧ್ಯಕ್ಷ ಅನಿಲ್‌ಕುಮಾರ್ ಭಂಡಾರಿ ಮಾತನಾಡಿ, ಈ ವರ್ಷದ ಸಮ್ಮೇಳನದಲ್ಲಿ ಭಾರತದ ಕಾಫಿ ಉದ್ಯಮದ ಪರಿಣಿತರ ಜತೆಗೆ ಬ್ರೆಝಿಲ್, ಯುಕೆ, ಯುಎಸ್‌ಎ, ಕೊಲಂಬಿಯಾ, ಇಟಲಿ, ಸ್ವಿಡ್ಜರ್‌ಲ್ಯಾಂಡ್, ಜರ್ಮನಿ, ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶಗಳ ಕಾಫಿ ಉದ್ಯಮದ ಪರಿಣಿತರು ಪಾಲ್ಗೊಳ್ಳಲಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಕಾಫಿ ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಜೋಸ್ ಸೆಟ್ಟ್, ಕೊಲಂಬಿಯಾ ಕಾಫಿ ಬೆಳೆಗಾರರ ಒಕ್ಕೂಟದ ಸಿಇಒ ರಾಬರ್ಟ್ ವೆಲೆಝ್, ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಪ್ರೊಫೆಸರ್ ಆಫ್ ಮೆಡಿಸಿನ್ ಡಾ.ಸಂಜೀವ್ ಚೋಪ್ರಾ ಸೇರಿದಂತೆ ಹಲವಾರು ಗಣ್ಯರು ಈ ಸಮ್ಮೇಳನದಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ನಾಲ್ಕು ದಿನಗಳ ಕಾಲ ನಡೆಯುವ ಕಾಫಿ ಉತ್ಸವವು ಕಾಫಿಗೆ ಸಂಬಂಧಿಸಿದ ಎಲ್ಲ ವಿಧದ ಅಂತಾರಾಷ್ಟ್ರೀಯ ಕಾಫಿ ಪ್ರದರ್ಶನ, ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳು, ಉತ್ಪನ್ನಗಳ ಬಿಡುಗಡೆ, ಕಾಫಿ ಕುರಿತು ರಸಪ್ರಶ್ನೆ, ಕಾಫಿ ಪ್ರಶಸ್ತಿಗಳು, ಗಾಲ್ಫ್ ಚಾಂಪಿಯನ್‌ಶಿಪ್ ಸೇರಿದಂತೆ ಹಲವಾರು ರೋಚಕ ಹಾಗೂ ಅತ್ಯಾಕರ್ಷಕ ಚಟುವಟಿಕೆಗಳನ್ನು ಒಳಗೊಂಡಿರಲಿದೆ ಎಂದು ಅವರು ತಿಳಿಸಿದರು.







