ತಕ್ಷಣವೇ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ಕೊಡಿಸಲು ಕ್ರಮ ವಹಿಸಿ: ವಿ.ಎಸ್.ಉಗ್ರಪ್ಪ
ವಿಜಯಪುರ ದಲಿತ ಬಾಲಕಿ ಅತ್ಯಾಚಾರ,ಕೊಲೆ ಪ್ರಕರಣ

ಬೆಂಗಳೂರು, ಡಿ. 21: ವಿಜಯಪುರದ ದಲಿತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿನ ಎಲ್ಲ ಆರೋಪಿಗಳನ್ನು ಶೀಘ್ರವೇ ಬಂಧಿಸಿ, ತ್ವರಿತವಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಲು ತನಿಖಾಧಿಕಾರಿಗಳು ಕ್ರಮ ವಹಿಸಬೇಕೆಂದು ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್,ಉಗ್ರಪ್ಪ ಸಲಹೆ ಮಾಡಿದ್ದಾರೆ.
ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹದಿನಾಲ್ಕು ವರ್ಷದ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣ ಅತ್ಯಂತ ಅಮಾನವೀಯ ಮತ್ತು ಅನಾಗರಿಕ, ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ ಎಂದ ತೀವ್ರವಾಗಿ ಖಂಡಿಸಿದರು.
ಪ್ರಕರಣದ ಪ್ರಮುಖ ಆರೋಪಿ ದೀಪಕ್ ಮುಳಸಾವಳಗಿ ತಲೆ ಮರೆಸಿಕೊಂಡಿದ್ದು, ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದಿದ್ದು, ಉಳಿದವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ ಅವರು, ಆರೋಪಿಗಳ ವಿರುದ್ಧ ಪೋಕ್ಸೋ, ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ, ಐಪಿಸಿ ಸೆಕ್ಷನ್ 143, 147, 341, 363, 376 ‘ಡಿ’, 302 ಅಡಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ತ್ವರಿತಗತಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ದಾಖಲಿಸಿ, ನಿಗದಿತ ಅವಧಿಯೊಳಗೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ತನಿಖಾಧಿಕಾರಿಗಳು ವಿಶೇಷ ಆಸ್ಥೆ ವಹಿಸಬೇಕು. ಆ ಮೂಲಕ ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಹೇಳಿದರು.
ಸಿಎಂ ನಿನ್ನೆ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದು, 8.25ಲಕ್ಷ ರೂ.ಪರಿಹಾರ ಘೋಷಿಸಿ, ಸ್ಥಳದಲ್ಲೆ 4.15ಲಕ್ಷ ರೂ.ಪರಿಹಾರವನ್ನು ಕುಟುಂಬಕ್ಕೆ ನೀಡಿದ್ದಾರೆ. ಎಷ್ಟೇ ಪರಿಹಾರ ನೀಡಿದರೂ ನೋವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಇಂತಹ ಕೃತ್ಯಗಳು ಮರುಕಳಿಸದಂತೆ ಅಗತ್ಯ ಮುನ್ನಚ್ಚರಿಕೆ ವಹಿಸಬೇಕು ಎಂದು ಅವರು ನುಡಿದರು.
ಎಚ್‌ಡಿಕೆಗೆ ತಿರುಗೇಟು: ದೌರ್ಜನ್ಯ ತಡೆ ಸಮಿತಿಗೆ ಈ ಹಿಂದೆ ಜೆಡಿಎಸ್ ಪಕ್ಷ ಪ್ರತಿನಿಧಿಸುತ್ತಿದ್ದ ನಾಣಯ್ಯನವರೇ ಅಧ್ಯಕ್ಷರಾಗಿದ್ದರು. ಎಚ್‌ಡಿಕೆ ಸಿಎಂ ಆಗಿ ಕೆಲಸ ಮಾಡಿದ್ದು, ತಾನು ವಿಪಕ್ಷ ನಾಯಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಸಮಿತಿಯು ರಾಜ್ಯದಲ್ಲಿ ನಡೆಯುವ ಎಲ್ಲ ಪ್ರಕರಣಗಳನ್ನು ಅಧ್ಯಯನ ಮಾಡಲು ಸಾಧ್ಯವಿಲ್ಲ ಎಂದು ಉಗ್ರಪ್ಪ ತಿರುಗೇಟು ನೀಡಿದರು.
ನನ್ನ ಮೇಲೆ ಒತ್ತಡ ಹೇರಿ ಸಮಿತಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಸೂಚಿಸಿದರು. ಈಗಾಗಲೇ ಮಧ್ಯಂತರ ವರದಿ ನೀಡಿದ್ದು, ರಾಜ್ಯ ಸರಕಾರ ಸಮಿತಿಗೆ ಕೆಲ ಮಾಹಿತಿ ನೀಡಬೇಕಿದೆ. ಮಾಹಿತಿ ನೀಡಿದರೆ ಕೂಡಲೇ ಅಂತಿಮ ವರದಿ ನೀಡಲಾಗುವುದು ಎಂದು ಅವರು ಹೇಳಿದರು.
‘ರಾಜ್ಯದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ತಡೆ ಸಮಿತಿ ಸದಸ್ಯರಿಗೆ ಆರೇಳು ತಿಂಗಳುಗಳಿಂದ ಭತ್ತೆಗಳನ್ನೇ(ಟಿಎ-ಡಿಎ) ರಾಜ್ಯ ಸರಕಾರ ಕೊಟ್ಟಿಲ್ಲ. ಆದರೂ, ಸಮಿತಿ ತನ್ನ ಇತಿ-ಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಗಮನಿಸಬೇಕು’
-ವಿ.ಎಸ್.ಉಗ್ರಪ್ಪ ಮೇಲ್ಮನೆ ಸದಸ್ಯ







