‘ಮಹಾದಾಯಿ’ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ವಿ.ಎಸ್.ಉಗ್ರಪ್ಪ ಆಗ್ರಹ

ಬೆಂಗಳೂರು, ಡಿ. 21: ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು, ಮಹಾದಾಯಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ, ಆ ಯೋಜನೆಯ ಎಲ್ಲ ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸುವ ಘೋಷಣೆ ಮಾಡಬೇಕೆಂದು ಮೇಲ್ಮನೆ ಸದಸ್ಯ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾದಾಯಿ ಮಾತುಕತೆಗೆ ಗೋವಾ ವಿಪಕ್ಷದ ಸದಸ್ಯರು ಮಾತುಕತೆಗೆ ಬರಬೇಕು ಎಂದು ಹೇಳುತ್ತಿದ್ದ ಬಿಎಸ್‌ವೈ ಪಟ್ಟು ಹಿಡಿದ್ದಿದ್ದರು. ಆದರೆ, ಇದೀಗ ಚುನಾವಣೆ ಕಾರಣಕ್ಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಯಡಿಯೂರಪ್ಪ ತಮ್ಮ ಶಕ್ತಿ ಬಳಸಿ ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಒಪ್ಪಿಸಬೇಕು. ಮೂರು ರಾಜ್ಯಗಳ ಸಿಎಂಗಳು ಸೇರಿ ನ್ಯಾಯಾಧೀಕರಣದ ಹೊರಗೆ ವಿವಾದ ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ಯಾವುದೇ ಪಕ್ಷಗಳ ಅಧ್ಯಕ್ಷರಿಂದ ಸಮಸ್ಯೆ ಇತ್ಯರ್ಥ ಅಸಾಧ್ಯ ಎಂದು ಅವರು ವಿಶ್ಲೇಷಿಸಿದರು.
ಕೇಂದ್ರ ಸರಕಾರ ಈ ಸಂಬಂಧ ಕೂಡಲೇ ಆದೇಶ ಹೊರಡಿಸಬೇಕು. ಅದು ಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಪತ್ರ ಬರೆದರೆ ಯೋಜನೆ ಅನುಷ್ಠಾನ ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಸಿಎಂ ಸಿದ್ದರಾಮಯ್ಯ, ಪ್ರಧಾನಿ, ಕೇಂದ್ರ, ಗೋವಾ, ಮಹಾರಾಷ್ಟ್ರ ಸಿಎಂಗಳಿಗೆ ಪತ್ರ ಬರೆದಿದ್ದರೂ ಪ್ರತಿಕ್ರಿಯೆ ಬಂದಿಲ್ಲ ಎಂದರು.
‘ಬಹುಕೋಟಿ ರೂ.ಮೊತ್ತದ 2ಜಿ ತರಂಗಾಂತರ ಹಂಚಿಕೆ ಹಗರಣ ಸಂಬಂಧ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದ್ದು, ಆರೋಪಿಗಳನ್ನು ಖುಲಾಸೆಗೊಳಿಸಿದೆ. ಹೀಗಾಗಿ ಬಿಜೆಪಿ ಸತ್ಯ ಮುಚ್ಚಿಟ್ಟು ಸುಳ್ಳು ಹೇಳಿದ ಕಾರಣಕ್ಕೆ ಪ್ರಧಾನಿ ಮೋದಿ ಸೇರಿ ಇನ್ನಿತರ ಮುಖಂಡರು ದೇಶದ ಜನರ ಕ್ಷಮೆ ಕೇಳಬೇಕು’
-ವಿ.ಎಸ್.ಉಗ್ರಪ್ಪ ಮೇಲ್ಮನೆ ಸದಸ್ಯ







