ಮೂರು ಪಾಕಿಸ್ತಾನಿ ಪ್ರಜೆಗಳ ವೈದ್ಯಕೀಯ ವೀಸಾ ಮಂಜೂರು: ಸುಷ್ಮಾ ಸ್ವರಾಜ್

ಹೊಸದಿಲ್ಲಿ, ಡಿ.21: ಭಾರತ ಸರಕಾರವು ಮೂರು ಪಾಕಿಸ್ತಾನಿ ಪ್ರಜೆಗಳ ವೈದ್ಯಕೀಯ ವೀಸಾವನ್ನು ಮಂಜೂರು ಮಾಡಿರುವುದಾಗಿ ವಿದೇಶ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಭಾರತದಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ಪಾಕಿಸ್ತಾನಿ ಪ್ರಜೆಗಳಾದ ಫಾತಿಮಾ ನಯೀಮ್ (13), ಮನ್ಸೂರ್ ಬಗಾನಿ ಮತ್ತು ಶೆಹಬ್ ಆಸಿಫ್ ವೈದ್ಯಕೀಯ ವೀಸಾ ನೀಡುವಂತೆ ಭಾರತ ಸರಕಾರವನ್ನು ಕೋರಿದ್ದರು. ಆಸಿಫ್‌ಗೆ ಕರುಳು ಮರುಜೋಡಣೆಯ ಅಗತ್ಯವಿದ್ದು ಚೆನ್ನೈ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯಲಿದ್ದಾರೆ. ಹಾಗಾಗಿ ಅವರ ವೈದ್ಯಕೀಯ ವೀಸಾ ಮಂಜೂರು ಮಾಡಲಾಗಿದೆ ಎಂದು ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಎರಡು ದೇಶಗಳ ಮಧ್ಯೆ ವಿವಿಧ ಕಾರಣಗಳಿಂದಾಗಿ ಸಂಬಂಧದಲ್ಲಿ ಬಿರುಕು ಮೂಡಿದ್ದರೂ ಸುಷ್ಮಾ ಸ್ವರಾಜ್ ಮಾತ್ರ ಗಡಿಯಾಚೆಗಿನಿಂದ ವೈದ್ಯಕೀಯ ಉದ್ದೇಶಕ್ಕಾಗಿ ಭಾರತಕ್ಕೆ ಆಗಮಿಸಲು ಬಯಸುವವರ ವೈದ್ಯಕೀಯ ವೀಸಾ ಅರ್ಜಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಲೇ ಬಂದಿದ್ದಾರೆ.
Next Story





