ಸಾಲಬಾಧೆ : ರೈತ ಆತ್ಮಹತ್ಯೆ

ಶೃಂಗೇರಿ, ಡಿ.21: ಸಾಲದಬಾಧೆ ತಾಳಲಾರದೇ ವೃದ್ದ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶೃಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿರ್ಲು ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವೃದ್ದ ರೈತನನ್ನು ಶಿರ್ಲು ಗ್ರಾಮದ ಯಂಕಗೌಡ(70) ಎಂದು ಗುರುತಿಸಲಾಗಿದೆ. ಯಂಕಗೌಡರ ಹೆಸರಿನಲ್ಲಿ ಶಿರ್ಲು ಗ್ರಾಮದ ಸ.ನಂ.27 ರಲ್ಲಿ 3.27 ಎಕರೆ ಕೃಷಿ ಭೂಮಿ ಇದ್ದು ಅದರಲ್ಲಿನ ಅಡಕೆ, ಕಾಫಿ, ಬಾಳೆ, ಹಾಗೂ ಗದ್ದೆಯಲ್ಲಿ ವಿವಿಧ ಬೆಳೆ ಬೆಳೆಯುತ್ತಿದ್ದರು.
ಜಮೀನು ಅಭಿವೃದ್ದಿಗಾಗಿ ಶೃಂಗೇರಿಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕಿನಲ್ಲಿ 2009 ರಲ್ಲಿ 52.939 ರೂ. ದೀರ್ಘಾವಧಿ ಸಾಲ, 25000 ಕೈಸಾಲ ಪಡೆದಿದ್ದು ಒಟ್ಟು 77939 ರೂ. ಸಾಲ ಮಾಡಿದ್ದರು. ಇತ್ತೀಚೆಗೆ ತೋಟದಲ್ಲಿ ಫಸಲು ಸರಿಯಾಗಿ ಬಾರದೇ ಇದ್ದು ಸಾಲದ ಕಂತು ಕಟ್ಟಲು ಸಾಧ್ಯವಾಗಿಲ್ಲವೆಂದು ಪ್ರತಿದಿನ ಅದೇ ಯೋಚನೆಯಲ್ಲಿ ಕೊರಗುತ್ತಿದ್ದರು.
ಅದೇ ಕೊರಗಿನಲ್ಲಿ ಯಂಕಗೌಡರು ತಮ್ಮ ಮಲಗುವ ಕೊಠಡಿಯ ಅಟ್ಟದ ಮಾಳಿಗೆಗೆ ಲುಂಗಿಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.





