ಬ್ಯಾಂಕಿಂಗ್, ದೂರಸಂಪರ್ಕ, ಆರ್ಥಿಕತೆಗೆ ಭಾರೀ ಪೆಟ್ಟು ನೀಡಿದ 2ಜಿ ಹಗರಣ ಆರೋಪ: ಕಪಿಲ್ ಸಿಬಲ್
“ಇದಕ್ಕೆಲ್ಲಾ ಬಿಜೆಪಿ, ವಿನೋದ್ ರಾಯ್ ಕಾರಣ”

ಹೊಸದಿಲ್ಲಿ,ಡಿ.21: ಈಗ ಇನ್ನೊಂದು ಸರಕಾರಿ ಏಜೆನ್ಸಿಯ ಮುಖ್ಯಸ್ಥರಾಗಿರುವ ಮಾಜಿ ಸಿಎಜಿ ವಿನೋದ್ ರಾಯ್ ಅವರನ್ನು ವಜಾಗೊಳಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ. ರಾಯ್ 2ಜಿ ಹಗರಣವನ್ನು ಬಯಲಿಗೆಳೆಯುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಸರಕಾರದ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಸಿಬಲ್ ಆಗ್ರಹಿಸಿದರು.
ದೇಶವು 2ಜಿ ಸುಳಿಯಲ್ಲಿ ಸಿಲುಕಿದ್ದು ದುರದೃಷ್ಟಕರ. ಇದರಿಂದಾಗಿ ದೂರಸಂಪರ್ಕ ಪರವಾನಿಗೆಗಳು ರದ್ದಾಗಿ ಬ್ಯಾಂಕುಗಳಲ್ಲಿ ಅನುತ್ಪಾದಕ ಆಸ್ತಿಗಳ ಪ್ರಮಾಣ ಹೆಚ್ಚುವಂತಾಯಿತು. ಇದು ಬ್ಯಾಂಕಿಂಗ್ ಮತ್ತು ದೂರಸಂಪರ್ಕ ಕ್ಷೇತ್ರಗಳು ಮತ್ತು ಆರ್ಥಿಕತೆಗೆ ಭಾರೀ ಪೆಟ್ಟು ನೀಡಿದೆ. ಇವೆಲ್ಲದಕ್ಕೂ ಬಿಜೆಪಿ ಮತ್ತು ರಾಯ್ ಕಾರಣ ಎಂದು ಅವರು ಕಿಡಿಕಾರಿದರು.
ಚಿದಂಬರಂ ಪ್ರತಿಕ್ರಿಯೆ
ಸರಕಾರದ ಅತ್ಯುನ್ನತ ಮಟ್ಟದಲ್ಲಿರುವವರನ್ನೊಳಗೊಂಡ ಪ್ರಮುಖ ಹಗರಣದ ಆರೋಪ ಎಂದಿಗೂ ನಿಜವಲ್ಲ ಮತ್ತು ಸರಿಯಲ್ಲ ಎನ್ನುವುದು ಸ್ಪಷ್ಟವಾಗಿದೆ ಮತ್ತು ಅದೀಗ ಸಾಬೀತಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಪಿ.ಚಿದಂಬರಂ ಹೇಳಿದರು.
ಪ್ರಕರಣ ಅಪರಾಧಿಕವಾಗಿರಲಿಲ್ಲ: ರೋಹಟ್ಗಿ
2ಜಿ ಸ್ಪ್ರೆಕ್ಟ್ರಂ ಹಂಚಿಕೆ ಹಗರಣ ಪ್ರಕರಣವು ಎಂದೂ ಅಪರಾಧಿಕ ವಿಷಯವಾಗಿರಲಿಲ್ಲ ಎಂದು ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಹೇಳಿದರು.
ಪ್ರಾಸಿಕ್ಯೂಷನ್ನಿನ ಮುಖ್ಯ ವಾದ ಉಪನಿಯಮ 8ರ ಕುರಿತಾಗಿತ್ತು ಮತ್ತು ಅದು ಸಿವಿಲ್ ವಿಷಯವಾಗಿತ್ತು. ಅದೆಂದೂ ಅಪರಾಧಿಕ ವಿಷಯವಾಗಿರಲಿಲ್ಲ. ನ್ಯಾಯಾಲಯವೂ ಇದನ್ನು ಎತ್ತಿ ಹಿಡಿದಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರೋಹಟ್ಗಿ ತಿಳಿಸಿದರು.







