ಗೋವಾ ಸರಕಾರ ಮಾತುಕತೆಗೆ ಸಿದ್ಧ: ಮನೋಹರ್ ಪಾರಿಕ್ಕರ್
ಮಹಾದಾಯಿ ನದಿ ನೀರು ಹಂಚಿಕೆ ವಿಚಾರ

ಬೆಂಗಳೂರು, ಡಿ.21: ಮಹಾದಾಯಿ ನದಿ ನೀರು ಹಂಚಿಕೆ ವಿಚಾರದ ಕುರಿತು ಸೌಹಾರ್ದಯುತವಾಗಿ ಮಾತುಕತೆಗೆ ಸಿದ್ಧವಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಗೋವಾ ರಾಜ್ಯದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಪತ್ರ ಬರೆದಿದ್ದಾರೆ.
ಮಹಾದಾಯಿ ನದಿ ನೀರು ಹಂಚಿಕೆ ವಿಚಾರವು ಮಹಾದಾಯಿ ನ್ಯಾಯಾಧೀಕರಣದ ಮುಂದಿದೆ. ಕುಡಿಯುವ ಉದ್ದೇಶಕ್ಕಾಗಿ ನೀರು ಬಳಕೆ ಮಾಡಲು ಗೋವಾ ಸರಕಾರ ವಿರೋಧಿಸುವುದಿಲ್ಲ. ಆದರೂ, ಈ ವಿಚಾರ ನ್ಯಾಯಾಧೀಕರಣದ ಸಲಹೆಯಡಿಯಲ್ಲಿ ಚರ್ಚೆ ನಡೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಕುಡಿಯುವ ನೀರು ಮನುಷ್ಯನ ಮೂಲಭೂತ ಅಗತ್ಯ ಎಂಬುದು ಗೋವಾ ಸರಕಾರ ಅರ್ಥ ಮಾಡಿಕೊಳ್ಳುತ್ತದೆ. ಮಾನವೀಯ ನೆಲೆಯಲ್ಲಿ ನಮ್ಮ ಸರಕಾರವು ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಬಳಕೆಗೆ ಸೀಮಿತವಾಗಿ ಸೌಹಾರ್ದಯುತವಾಗಿ ಚರ್ಚೆ ನಡೆಸಲು ಸಿದ್ಧವಿದೆ ಎಂದು ಮನೋಹರ್ ಪಾರಿಕ್ಕರ್ ಹೇಳಿದ್ದಾರೆ.
ಕುಡಿಯುವ ನೀರಿನ ವಿಚಾರದಲ್ಲಿ ಆಗತ್ಯವಿರುವ ಎಲ್ಲ ಸಹಕಾರವನ್ನು ನೀಡಲು ಗೋವಾ ಸರಕಾರ ಸಿದ್ಧವಿದೆ ಎಂದು ಮನೋಹರ್ ಪಾರಿಕ್ಕರ್ ಪತ್ರದಲ್ಲಿ ತಿಳಿಸಿದ್ದಾರೆ.





