ಡಿ. 22ರಿಂದ ಕರಾವಳಿ ಉತ್ಸವ: ಬೃಹತ್ ಸಾಂಸ್ಕೃತಿಕ ಮೆರವಣಿಗೆ
ಮಂಗಳೂರು, ಡಿ.21: ಬಹುನಿರೀಕ್ಷಿತ ಕರಾವಳಿ ಉತ್ಸವಕ್ಕೆ ಮಂಗಳೂರಿನಲ್ಲಿ ಚಾಲನೆ ದೊರಕಲಿದ್ದು, ಡಿ.31ರತನಕ ನಡೆಯಲಿದೆ. ಡಿ.22ರಂದು ಸಂಜೆ 3:30ರಿಂದ ನೆಹರೂ ಮೈದಾನದಿಂದ ಕರಾವಳಿ ಉತ್ಸವ ಮೈದಾನದವರೆಗೆ ಆಕರ್ಷಕ ಬೃಹತ್ ‘ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.
ಸಚಿವ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಜೆ 5:30ಕ್ಕೆ ಕರಾವಳಿ ಉತ್ಸವ ಮೈದಾನದಲ್ಲಿ ‘ವಸ್ತು ಪ್ರದರ್ಶನವನ್ನು’ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಸಂಜೆ 6 ಗಂಟೆಗೆ ಕರಾವಳಿ ಉತ್ಸವ ಮೈದಾನದಲ್ಲಿ ಕರಾವಳಿ ಉತ್ಸವವನ್ನು ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ ಪ್ರಕಾಶ್ ರೈ ಉದ್ಘಾಟಿಸಲಿದ್ದಾರೆ.
ಡಿ. 22ರಂದು ಅಪರಾಹ್ನ 3:30ಕ್ಕೆ ನೆಹರೂ ಮೈದಾನದಿಂದ ಹೊರಡುವ ಮೆರವಣಿಗೆಯು ಎ.ಬಿ. ಶೆಟ್ಟಿ ಸರ್ಕಲ್, ಗಡಿಯಾರ ಗೋಪುರ, ಹಂಪನ್‌ಕಟ್ಟೆ ವೃತ್ತ, ಕೆ.ಎಸ್. ರಾವ್ ರಸ್ತೆ, ನವಭಾರತ ಸರ್ಕಲ್, ಪಿ.ವಿ.ಎಸ್. ಜಂಕ್ಷನ್, ಮಹಾತ್ಮಾ ಗಾಂಧಿ ರಸ್ತೆ, ಬಳ್ಳಾಲ್‌ಬಾಗ್, ಲಾಲ್‌ಭಾಗ್, ಕರಾವಳಿ ಉತ್ಸವ ಮೈದಾನದಲ್ಲಿ ಸಂಪನ್ನಗೊಳ್ಳಲಿದೆ.
ವೈವಿಧ್ಯಮಯವಾದ ಸಾಂಸ್ಕೃತಿಕ ತಂಡಗಳಿಂದ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾತಂಡಗಳ ಪ್ರದರ್ಶನಗಳು, ನೃತ್ಯಗಳು, ಚೆಂಡೆ, ಡೋಲು ಇತ್ಯಾದಿ ಒಳಗೊಂಡಿರುತ್ತವೆ. ಸುಮಾರು 80ಕ್ಕೂ ಹೆಚ್ಚು ತಂಡಗಳು ವಿವಿಧ ಜಿಲ್ಲೆಗಳಿಂದ ಪಾಲ್ಗೊಳ್ಳಲಿವೆ.
ವಿಶೇಷವಾಗಿ ಮಹಿಳಾ ವೀರಗಾಸೆ, ಚಿಕ್ಕಮಗಳೂರು, ಶಿವಮೊಗ್ಗದ ಡೊಳ್ಳು ಕುಣಿತ, ಸಾಗರದ ಕೋಲಾಟ, ಹಾವೇರಿಯ ಪುರವಂತಿಕೆ, ಧಾರವಾಡದ ಜಗ್ಗಲಿಗೆ ಮೇಳ, ಮಾಗಡಿಯ ಪಟ್ಟದ ಕುಣಿತ, ತುಮಕೂರಿನ ಸೋಮನ ಕುಣಿತ, ರಾಮನಗರದ ಪೂಜಾ ಕುಣಿತ, ಮೈಸೂರಿನ ವೀರಭದ್ರ ಕುಣಿತ, ಹಾವೇರಿಯ ಬೇಡರ ಕುಣಿತ, ಕಾರವಾರದ ಸುಗ್ಗಿ ಕುಣಿತ, ಮೈಸೂರಿನ ಕಂಸಾಳೆ, ಬದಿಯಡ್ಕದ ತ್ರಯಂಬಕಂ, ಕಾಸರಗೋಡಿನ ದುಡಿ ಇನದನ ತಂಡಗಳಲ್ಲದೆ. ಕನ್ನಡ ಭುವನೇಶ್ವರಿಯ ಟ್ಯಾಬ್ಲೊ ಮೊದಲ್ಗೊಂಡು ತುಳುನಾಡಿನ ಜನಪದ ಕುಣಿತ, ಯಕ್ಷಗಾನ ವೇಷಗಳು, ಸೋಣ ಜೋಗಿ ಕುಣಿತ, ಹುಲಿವೇಷ, ತಾಲೀಮು, ಶಂಖ ದಾಸರು, ಜಾನಪದ ಗೊಂಬೆ, ಕೊರಗರ ಗಜಮೇಳ ಮರಕಾಲು ಹುಲಿ ವೇಷ ಇತ್ಯಾದಿ ಅನೇಕಾನೇಕ ತಂಡಗಳು ಭಾಗವಹಿಸಲಿದೆ. ಬೆಡಿ ಗರ್ನಲ್ ಸಹಿತವಾಗಿ ವಿವಿಧ ದೇವಸ್ಥಾನಗಳಿಂದ ಸಾಂಪ್ರದಾಯಿಕ ವಾದನದೊಂದಿಗೆ ತಟ್ಟೀರಾಯ, ಬೇತಾಳ ಮೆರವಣಿಗೆಗೆ ಮೆರಗು ನೀಡಲಿದೆ.







